ADVERTISEMENT

ಬಿಜೆಪಿ 'ಉತ್ತಮ ಅಭ್ಯರ್ಥಿ'ಯನ್ನು ಕಣಕ್ಕಳಿಸಿದರೆ ಹಿಂದೆ ಸರಿಯುವೆ: ಉತ್ಪಲ್‌

ಪಿಟಿಐ
Published 22 ಜನವರಿ 2022, 11:37 IST
Last Updated 22 ಜನವರಿ 2022, 11:37 IST
ಉತ್ಪಲ್‌ ಪರಿಕ್ಕರ್‌ (ಐಎಎನ್ಎಸ್‌ ಚಿತ್ರ)
ಉತ್ಪಲ್‌ ಪರಿಕ್ಕರ್‌ (ಐಎಎನ್ಎಸ್‌ ಚಿತ್ರ)   

ಪಣಜಿ: ಬಿಜೆಪಿ ಪಕ್ಷವನ್ನು ತೊರೆದಿದ್ದು ಅತ್ಯಂತ ಕಠಿಣ ನಿರ್ಧಾರ ಎಂದಿರುವ ಉತ್ಪಲ್‌ ಪರಿಕ್ಕರ್‌, ಪಣಜಿಯಲ್ಲಿ ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.

ಪಣಜಿಯಲ್ಲಿ ಹಾಲಿ ಶಾಸಕ ಅಟಾನಾಸಿಯೊ ಮೊನಸೆರೆಟ ಅವರನ್ನೇ ಕಣಕ್ಕಿಳಿಸುವ ನಿರ್ಧಾರವನ್ನು ಬಿಜೆಪಿ ಪ್ರಕಟಿಸಿದೆ. 2019ರ ಜುಲೈನಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ 10 ಶಾಸಕರ ಪೈಕಿ ಮೊನಸೆರೆಟ ಅವರು ಒಬ್ಬರು. ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ಸೇರಿದಂತೆ ಕ್ರಿಮಿನಲ್‌ ಪ್ರಕರಣಗಳನ್ನು ಮೊನಸೆರಟ ಎದುರಿಸುತ್ತಿದ್ದಾರೆ.

'ಬಿಜೆಪಿ ಸದಾ ತನ್ನ ಹೃದಯದಲ್ಲಿದೆ. ಪಕ್ಷದ ಆತ್ಮಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ' ಎಂದು ಉತ್ಪಲ್‌ ಅವರು ಶನಿವಾರ 'ಪಿಟಿಐ'ಗೆ ತಿಳಿಸಿದ್ದಾರೆ.

ADVERTISEMENT

'ಈ ನಿರ್ಧಾರದಿಂದ ನನಗೆ ಸಂತೋಷವಾಗಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಪಣಜಿ ವಿಧಾನಸಭಾ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ' ಎಂದು ಉತ್ಪಲ್‌ ತಿಳಿಸಿದ್ದಾರೆ.

'1994ರಲ್ಲಿ ಮನೋಹರ್‌ ಪರಿಕ್ಕರ್‌ ಅವರನ್ನು ಪಕ್ಷದಿಂದ ಹೊರ ದೂಡುವ ಪ್ರಯತ್ನದ ಭಾಗವಾಗಿ ಟಿಕೆಟ್‌ ನಿರಾಕರಿಸಲಾಗಿತ್ತು' ಎಂಬುದನ್ನು ಸ್ಮರಿಸಿದ ಉತ್ಪಲ್‌, ತಮ್ಮ ತಂದೆಯ ಪರ ಜನರಿದ್ದಿದ್ದರಿಂದ ಷಡ್ಯಂತ್ರ ಫಲಿಸಲಿಲ್ಲ ಎಂದಿದ್ದಾರೆ.

'ತಂದೆಯನ್ನು ಪಕ್ಷದಿಂದ ಹೊರ ಹಾಕಲು ಪ್ರಯತ್ನಿಸಿದವರೇ ಈಗಲೂ ಪಕ್ಷದ ಪ್ರಮುಖ ಸ್ಥಾನದಲ್ಲಿದ್ದಾರೆ. 2019ರಲ್ಲಿ ತಂದೆಯ ಸಾವಿನ ಬಳಿಕ ಪಣಜಿ ಉಪ-ಚುನಾವಣೆಯಲ್ಲಿ ತನಗೆ ಜನ ಬೆಂಬಲವಿಲ್ಲ ಎಂಬ ಕಾರಣ ನೀಡಿ ಟಿಕೆಟ್‌ ನಿರಾಕರಿಸಲಾಗಿತ್ತು. ನಾನು ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದೆ ಮತ್ತು ನಿರ್ಧಾರವನ್ನು ಗೌರವಿಸಿದ್ದೆ. ಪಕ್ಷದಲ್ಲಿ ಕೆಲವರು ಮತ್ತೊಬ್ಬ ಪರಿಕ್ಕರ್‌ನನ್ನು ಬಯಸುತ್ತಿಲ್ಲ' ಎಂದು ಉತ್ಪಲ್‌ ಹೇಳಿದ್ದಾರೆ.

'ಗೋವಾದಲ್ಲಿ ಬಿಜೆಪಿ ಕುಸಿಯುತ್ತಿದೆ. ಜೆಪಿ ನಡ್ಡಾ ಅವರು ಗೋವಾಕ್ಕೆ ಆಗಮಿಸಿದಾಗ ಕೆಲವು ಜೋಡಿಗಳು ಪಕ್ಷದ ಟಿಕೆಟ್‌ಗಾಗಿ ನಿರೀಕ್ಷಿಸಿದ್ದರು. ಮನೋಹರ್‌ ಪರಿಕ್ಕರ್‌ ಅವರು ಬದುಕಿರುತ್ತಿದ್ದರೆ ಯಾವೊಬ್ಬ ಪುರುಷ ರಾಜಕಾರಣಿಯೂ ತನ್ನ ಹೆಂಡತಿಗೆ ಟಿಕೆಟ್‌ ಕೇಳುವ ಧೈರ್ಯ ಮಾಡುತ್ತಿರಲಿಲ್ಲ' ಎಂದಿದ್ದಾರೆ.

ಪಣಜಿ ಹಾಲಿ ಶಾಸಕ ಅಟಾನಾಸಿಯೊ ಮೊನಸೆರೆಟ ಮತ್ತು ಅವರ ಪತ್ನಿ ಜೆನಿಫೆರ್‌ ಅವರಿಗೆ, ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಮತ್ತು ಅವರ ಪತ್ನಿ ದಿವ್ಯಾ ರಾಣೆ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

'ಮನೋಹರ್‌ ಪರಿಕ್ಕರ್‌ ಅವರ ಮಗ ಎಂಬ ಕಾರಣಕ್ಕೆ ನಾನು ಟಿಕೆಟ್‌ ಬಯಸಿರಲಿಲ್ಲ. ಹಾಗೆ ಮಾಡಬೇಕು ಎಂದಿದ್ದರೆ ಉಪ-ಚುನಾವಣೆಯಲ್ಲೇ ಮಾಡುತ್ತಿದ್ದೆ. ಅಂದು ತಂದೆಯ ಜೊತೆಗಿದ್ದವರು ಪ್ರಸ್ತುತ ನನ್ನ ಜೊತೆಗಿದ್ದಾರೆ. ಅವರು ನನ್ನ ಜೊತೆಗೆ ನಿಂತಿದ್ದಾರೆ ಎಂದರೆ ಅದಕ್ಕೆ ಕಾರಣವಿದೆ' ಎಂದು ವಿವರಿಸಿದ ಉತ್ಪಲ್‌, ತನಗೆ ಟಿಕೆಟ್‌ ನಿರಾಕರಿಸುವ ಮೂಲಕ ಬಿಜೆಪಿಯ ಹಲವು ಕಾರ್ಯಕರ್ತರ ಉತ್ಸಾಹವನ್ನು ಕುಗ್ಗಿಸಿದೆ ಎಂದಿದ್ದಾರೆ.

ಪಣಜಿಯಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಲ ಉತ್ಪಲ್‌ ಅವರ ತಂದೆ, ಮಾಜಿ ಸಿಎಂ ಮತ್ತು ಬಿಜೆಪಿ ಹಿರಿಯ ಮುಖಂಡ ಮನೋಹರ್‌ ಪರಿಕ್ಕರ್‌ ಅವರು ಪ್ರತಿನಿಧಿಸಿದ್ದಾರೆ. ಅದೇ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದ ಉತ್ಪಲ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಇದರಿಂದ ಬೇಸರಗೊಂಡ ಉತ್ಪಲ್‌ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪಣಜಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.