ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಭದ್ರಕೋಟೆ ಗೋರಖಪುರದ ಬ್ರಾಹ್ಮಣ ಸಮುದಾಯದ ಹಲವು ಮುಖಂಡರು ಬಿಜೆಪಿ ಮತ್ತು ಬಿಎಸ್‌ಪಿ ತೊರೆದು ಎಸ್‌ಪಿಗೆ ಇತ್ತೀಚಿನ ದಿನಗಳಲ್ಲಿ ಸೇರ್ಪಡೆ ಆಗಿದ್ದಾರೆ.
ಬಿಎಸ್‌ಪಿಯ ಲೋಕಸಭಾ ಸದಸ್ಯ ರಿತೇಶ್ ಪಾಂಡೆ ಅವರ ತಂದೆ ರಾಕೇಶ್ ಪಾಂಡೆ ಅವರು ಎಸ್‌ಪಿಗೆ ಸೇರಿದ್ದಾರೆ. ಬ್ರಾಹ್ಮಣ ಸಮುದಾಯದ ಮುಖಂಡ, ಮಾಜಿ ಶಾಸಕ ಬ್ರಿಜೇಶ್ ಮಿಶ್ರಾ ಅವರೂ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಆದರು.ಬಿಜೆಪಿ ಶಾಸಕಿ ಮಾಧುರಿ ವರ್ಮಾ ಅವರು ಎಸ್‌ಪಿ ಸೇರಿದ್ದಾರೆ. ಅವರು ಪ್ರಭಾವಿ ಕುರ್ಮಿ ಸಮುದಾಯದ ನಾಯಕಿ. ಈ ಪಕ್ಷಾಂತರಗಳು ಚುನಾವಣೆಗೆ ಇನ್ನೇನು ಕೆಲವೇ ತಿಂಗಳಿರುವ ಈ ಸಂದರ್ಭದಲ್ಲಿ ಎಸ್‌ಪಿಯಲ್ಲಿ ಹುರುಪು ತುಂಬಿದೆ.
ರಾಕೇಶ್ ಪಾಂಡೆ ಅವರು ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಪೂರ್ವಾಂಚಲ ಪ್ರದೇಶದಲ್ಲಿ ಅವರು ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕ. ಪಾಂಡೆ ಅವರ ಮಗ 2014ರಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.
ಪಾಂಡೆ ಅವರ ನಿರ್ಗಮನವು ಬಿಎಸ್‌ಪಿಗೆ ಭಾರಿ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಬ್ರಾಹ್ಮಣ ಸಮುದಾಯವನ್ನು ಓಲೈಸಲು ಬಿಎಸ್‌ಪಿ ಹರಸಾಹಸ ಪಡುತ್ತಿದೆ. ಎಸ್‌ಪಿ ಕೂಡ ಬ್ರಾಹ್ಮಣ ಸಮುದಾಯದ ಮತ ಪಡೆಯುವ ಮೂಲಕ ತನ್ನ ಬೆಂಬಲ ನೆಲೆ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ. ಹಾಗಾಗಿ, ಬ್ರಾಹ್ಮಣ ಸಮುದಾಯದ ಹಲವು ಮುಖಂಡರ ಸೇರ್ಪಡೆಯು ಎಸ್‌ಪಿಗೆ ಅನುಕೂಲಕರವಾಗಿದೆ.
ಪೂರ್ವಾಂಚಲ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯದ ಅತ್ಯಂತ ಪ್ರಮುಖ ನಾಯಕ, ಆರು ಬಾರಿ ಶಾಸಕರಾಗಿದ್ದ ಪಂಡಿತ್ ಹರಿಶಂಕರ್ ತಿವಾರಿ ಅವರು ಕೆಲ ದಿನಗಳ ಹಿಂದೆ ಬಿಎಸ್‌ಪಿ ತೊರೆದು ಎಸ್‌ಪಿ ಸೇರಿದ್ದರು. ಅವರ ಇಬ್ಬರು ಮಕ್ಕಳು ಕೂಡ ಎಸ್‌ಪಿಗೆ ಬಂದಿದ್ದಾರೆ. ಅವರಲ್ಲಿ ಒಬ್ಬರು ಶಾಸಕರಾಗಿದ್ದರೆ ಇನ್ನೊಬ್ಬರು ಮಾಜಿ ಸಂಸದ.
ಖಲೀಲಾಬಾದ್‌ನ ಬಿಜೆಪಿ ಶಾಸಕ ಮತ್ತು ಬ್ರಾಹ್ಮಣ ನಾಯಕ ದಿಗ್ವಿಜಯ್ ನಾರಾಯಣ್ ಚೌಬೆ ಅವರೂ ಇತರ ಹಲವು ಮುಖಂಡರ ಜತೆಗೆ ಎಸ್‌ಪಿಗೆ ಇತ್ತೀಚೆಗೆ ಸೇರಿದ್ದಾರೆ.
ಬ್ರಾಹ್ಮಣ ಸಮುದಾಯದ ಮುಖಂಡರು ಭಾರಿ ಸಂಖ್ಯೆಯಲ್ಲಿ ಎಸ್‌ಪಿ ಸೇರುತ್ತಿರುವುದು ಬಿಜೆಪಿಯಲ್ಲಿ ಕಳವಳಕ್ಕೆ ಕಾರಣವಾಗಿದೆ. ಬ್ರಾಹ್ಮಣ ಸಮುದಾಯದಲ್ಲಿರುವ ಅತೃಪ್ತಿಯ ಬೆಂಕಿ ನಂದಿಸಲು ಬಿಜೆಪಿ ಭಾರಿ ಪ್ರಯತ್ನ ನಡೆಸುತ್ತಿದೆ. ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರುವ ಯತ್ನವೂ ನಡೆದಿದೆ.
ರಾಜ್ಯಸಭಾ ಸದಸ್ಯ ಶಿವಪ್ರತಾಪ್ ಶುಕ್ಲಾ ಅವರ ನೇತೃತ್ವದಲ್ಲಿ 16 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬ್ರಾಹ್ಮಣ ಸಮುದಾಯಕ್ಕಾಗಿ ಕೈಗೊಂಡ ಕ್ರಮಗಳನ್ನು ಸಮುದಾಯಕ್ಕೆ ವಿವರಿಸುವುದು ಈ ಸಮಿತಿಯ ಹೊಣೆಯಾಗಿದೆ.
ಬ್ರಾಹ್ಮಣ ಸಮುದಾಯದ ಮುಖಂಡ, ಲಖಿಂಪುರ ಖೇರಿಯ ಸಂಸದ ಅಜಯ್ ಮಿಶ್ರಾ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಲಾಗಿದೆ. ಅಜಯ್ ಅವರ ಮಗ ಆಶಿಶ್ ಮಿಶ್ರಾ ಅವರು ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ. ಅಜಯ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದರೂ ಸರ್ಕಾರ ಮಣಿದಿಲ್ಲ.
‘ಗಾಂಧಿ ಕುಟುಂಬದವರು ಆಕಸ್ಮಿಕ ಹಿಂದೂಗಳು’
ನೆಹರೂ–ಗಾಂಧಿ ಕುಟುಂಬದವರು ‘ಆಕಸ್ಮಿಕ ಹಿಂದೂಗಳು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಜನರ ಧರ್ಮಕ್ಕೆ ತಲೆಬಾಗುವಂತೆ ಅವರ ಮೇಲೆ ಒತ್ತಡ ಇದೆ. ಈ ಒತ್ತಡದಿಂದಾಗಿಯೇ ಅವರು ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುತ್ತಿದ್ದಾರೆ ಎಂದು ಯೋಗಿ ಹೇಳಿದ್ದಾರೆ. ಅಮೇಠಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಿ ಮಾತನಾಡಿದರು.
‘ಹಿಂದೂ ಎನ್ನಲು ಹೆಮ್ಮೆಯಾಗುತ್ತಿದೆ ಎಂದು ಮುಖ್ಯಮಂತ್ರಿಯಾಗುವ ಮುನ್ನವೂ ನಾನು ಹೇಳುತ್ತಿದ್ದೆ. ಅದನ್ನೇ ಇವತ್ತೂ ಹೇಳುತ್ತಿದ್ದೇನೆ’ ಎಂದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರತಿಪಾದಿಸಿದ ಹಿಂದುತ್ವ ಚಿಂತನೆಯನ್ನು ಯೋಗಿ ಅಲ್ಲಗಳೆದಿದ್ದಾರೆ. ರಾಹುಲ್‌ಗೆ ಹಿಂದೂ ಧರ್ಮದ ಬಗ್ಗೆ ಏನೂ ತಿಳಿದಿಲ್ಲ, ಅವರಿಗೆ ಹಿಂದುತ್ವದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಯೋಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.