ADVERTISEMENT

ಯುಪಿ: 108 ದಿನ ಖಾದಿ ಉತ್ಪನ್ನಗಳ ಮೇಲೆ ಶೇ 25ರಷ್ಟು ರಿಯಾಯಿತಿ ಘೋಷಿಸಿದ CM ಯೋಗಿ

ಪಿಟಿಐ
Published 2 ಅಕ್ಟೋಬರ್ 2024, 9:56 IST
Last Updated 2 ಅಕ್ಟೋಬರ್ 2024, 9:56 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ: ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ 108 ದಿನಗಳ ಕಾಲ ಖಾದಿ ಉತ್ಪನ್ನಗಳ ಮೇಲೆ ಶೇಕಡ 25ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.

ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಪ್ರಯುಕ್ತ ಅವರಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಗಾಂಧಿ ಆಶ್ರಮದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಗಾಂಧಿ ಆಶ್ರಮಗಳಲ್ಲಿ 108 ದಿನಗಳ ಕಾಲ ಖಾದಿ ಉತ್ಪನ್ನಗಳ ಮೇಲೆ ಶೇ 25 ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಿದೇಶಿ ಉತ್ಪನ್ನಗಳ ಬದಲಿಗೆ ಸ್ವದೇಶಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಬಳಸಲು ಜನರನ್ನು ಪ್ರೋತ್ಸಾಹಿಸಬೇಕು ಅವರು ಮನವಿ ಮಾಡಿದ್ದಾರೆ.

ADVERTISEMENT

‘ಸ್ವದೇಶಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಸುತ್ತವೆ. ಇದರೊಂದಿಗೆ ಸ್ವಾವಲಂಬಿ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸಹಾಯ ಮಾಡಿದಂತಾಗುತ್ತದೆ. ಜತೆಗೆ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ‘ಗ್ರಾಮ ಸ್ವರಾಜ್’ ಅಭಿಯಾನದ ಪ್ರಕಾರ ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸಹಾಯಕವಾಗಲಿದೆ’ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಸ್ವಚ್ಛ ಭಾರತ್ ಮಿಷನ್’ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಮಾಜಸೇವೆಯನ್ನು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.