ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಎಲ್ಲ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ರಜೆಗಳನ್ನು ರದ್ದುಪಡಿಸಿದ್ದಾರೆ. ಮುಂದಿನ ತಿಂಗಳು ಮೇ 4ರ ವರೆಗೂ ಎಲ್ಲ ಸಿಬ್ಬಂದಿಯ ರಜೆಗಳನ್ನು ರದ್ದುಪಡಿಸುವ ಜೊತೆಗೆ ಈಗಾಗಲೇ ರಜೆಯಲ್ಲಿರುವವರು 24 ಗಂಟೆಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದ್ದಾರೆ.
'ಎಲ್ಲ ಆಡಳಿತಾಧಿಕಾರಿಗಳು, ಪೊಲೀಸರು, ಠಾಣಾಧಿಕಾರಿ, ಜಿಲ್ಲಾ ಪೊಲೀಸ್ ಮುಖಸ್ಥರಿಂದ ಹಿಡಿದು ಜಿಲ್ಲಾಧಿಕಾರಿಗಳು, ವಿಭಾಗೀಯ ಕಮಿಷನರ್‌ಗಳ ರಜೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮೇ 4ವರೆಗೂ ರದ್ದುಪಡಿಸಲಾಗಿದೆ. ಪ್ರಸ್ತುತ ರಜೆಯಲ್ಲಿರುವವರು ಮುಂದಿನ 24 ಗಂಟೆಗಳೊಳಗೆ ತಮ್ಮ ಕರ್ತವ್ಯಗಳಿಗೆ ಹಿಂದಿರುಗಬೇಕು' ಎಂದು ಮುಖ್ಯಮಂತ್ರಿಗಳ ಕಚೇರಿಯು ಸೋಮವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಲು ಸಾಲು ಹಬ್ಬಗಳು ಇರುವ ಕಾರಣ ಮುಖ್ಯಮಂತ್ರಿ ಆದಿತ್ಯನಾಥ್ ಈ ಆದೇಶ ಹೊರಡಿಸಿರುವುದಾಗಿ ವರದಿಯಾಗಿದೆ. ಠಾಣಾಧಿಕಾರಿಯಿಂದ ಹಿಡಿದು ಎಡಿಜಿ ಹಂತದ ಅಧಿಕಾರಿಗಳವರೆಗೂ ಎಲ್ಲರೂ ಧಾರ್ಮಿಕ ಮುಖಂಡರು ಹಾಗೂ ಪ್ರಮುಖರೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ.
ಮುಂಬರುವ ಹಬ್ಬಗಳ ಸಮಯದಲ್ಲಿ ಶಾಂತಿ ಕಾಪಾಡುವ ಕುರಿತು ಮುಂದಿನ 24 ಗಂಟೆಗಳಲ್ಲಿ ಧಾರ್ಮಿಕ ಮುಖಂಡರಿಂದ ಖಚಿತಪಡಿಸಿಕೊಳ್ಳುವಂತೆ ಆದೇಶಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ, ಗಸ್ತು ತಿರುಗುವುದು ಹಾಗೂ ಪರಿಸ್ಥಿತಿಯ ಮೇಲೆ ನಿಗಾವಹಿಸಲು ಡ್ರೋನ್ ಬಳಕೆಯ ಕುರಿತು ಆದೇಶದಲ್ಲಿ ಸೂಚಿಸಲಾಗಿದೆ. ಈ ಬಾರಿ ಈದ್ ಮತ್ತು ಅಕ್ಷಯ ತೃತೀಯ ಒಂದೇ ದಿನ (ಮೇ 3) ಆಚರಿಸಲಾಗುತ್ತಿದೆ.
'ಧಾರ್ಮಿಕ ಆಚರಣೆಗಳಲ್ಲಿ ಮೈಕ್‌ಗಳನ್ನು ಬಳಸಬಹುದಾಗಿದೆ, ಆದರೆ ಕಾರ್ಯಕ್ರಮದ ಪ್ರಾಂಗಣದಿಂದ ಸದ್ದು ಹೊರಬರದಂತೆ ಗಮನಿಸಬೇಕು. ಹೊಸದಾಗಿ ಕಾರ್ಯಕ್ರಮದ ಜಾಗಗಳಲ್ಲಿ ಮೈಕ್‌ಗಳ ಅಳವಡಿಕೆಗೆ ಅವಕಾಶ ನೀಡುವುದಿಲ್ಲ' ಎಂದು ಸ್ಪಷ್ಟಪಡಿಸಲಾಗಿದೆ.
'ಮುಂಚಿತವಾಗಿ ಅನುಮತಿ ಇಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆಗಳನ್ನು ನಡೆಸುವಂತಿಲ್ಲ. ಅನುಮತಿ ನೀಡುವುದಕ್ಕೂ ಮುನ್ನ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಕುರಿತು ಆಯೋಜಕರಿಂದ ಅಫಿಡವಿಟ್ ಪಡೆಯಬೇಕು. ಪಾರಂಪರಿಕವಾಗಿ ನಡೆಸಲಾಗುವ ಧಾರ್ಮಿಕ ಮೆರವಣಿಗೆಗಳಿಗೆ ಮಾತ್ರವೇ ಅನುಮತಿ ನೀಡಲಾಗುತ್ತದೆ. ಹೊಸ ಕಾರ್ಯಕ್ರಮಗಳಿಗೆ ಅನುಮತಿ ನೀಡುವಂತಿಲ್ಲ,..' ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಯು ಸರ್ಕಾರ ಮತ್ತು ಜನರ ಮೊದಲ ಆದ್ಯತೆಯಾಗಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.