ಲಖನೌ: ಉತ್ತರ ಪ್ರದೇಶದ ರಾಂಪುರದ ನ್ಯಾಯಾಲಯವು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಇಬ್ಬರು ಯುವತಿಯರು ಒಟ್ಟಿಗೆ ವಾಸಿಸಲು ಅನುಮತಿ ನೀಡಿದೆ.
ಸುಮಾರು ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ 20ರ ಆಸುಪಾಸಿನ ಯುವತಿ, ರಾಂಪುರದ ಶಹಬಾದ್ ಪ್ರದೇಶದಲ್ಲಿ ತನ್ನ 'ಗೆಳತಿ' ಮನೆಯಲ್ಲಿದ್ದಳು. ಪೊಲೀಸರ ಪ್ರಕಾರ, ಆಕೆಯ ಕುಟುಂಬ ಜುಲೈನಲ್ಲಿ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿತ್ತು.
ಇತ್ತೀಚೆಗೆ ತನ್ನ ಸ್ನೇಹಿತೆಯೊಂದಿಗೆ ಶಹಬಾದ್‌ನ ಮನೆಯಲ್ಲಿ ಕಾಣಿಸಿಕೊಂಡಿದ್ದ ಯುವತಿ, ತನ್ನ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿದ್ದು, ಅವಳ ಜೊತೆ ಇರುವ ಉದ್ದೇಶದಿಂದ ಸ್ವಇಚ್ಛೆಯಿಂದ ಮನೆ ತೊರೆದಿದ್ದೇನೆ ಎಂದು ಹೇಳಿದ್ದಳು.
ಬಳಿಕ ಇಬ್ಬರನ್ನೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಇಬ್ಬರೂ ಮಹಿಳೆಯರು 18 ವರ್ಷಕ್ಕಿಂತ ಮೇಲ್ಪಟ್ಟವರು. ಸ್ವಇಚ್ಛೆಯಿಂದ ಜೊತೆಗಿರಲು ನಿರ್ಧರಿಸಿರುವುದರಿಂದ ಅವರಿಗೆ ಒಟ್ಟಿಗೆ ವಾಸಿಸಲು ಅನುಮತಿ ನೀಡಲಾಗುತ್ತಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
‘ನಾಪತ್ತೆಯಾಗಿದ್ದ ಯುವತಿಯನ್ನು ಪೊಲೀಸ್ ತಂಡವು ಪತ್ತೆ ಮಾಡಿದ ನಂತರ, ಆಕೆ ತನ್ನ ಕುಟುಂಬದೊಂದಿಗೆ ಹೋಗಲು ಒಪ್ಪಿಲ್ಲ. ಬದಲಾಗಿ, ತನ್ನ 'ಸ್ನೇಹಿತೆ'ಯೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇರಲು ಬಯಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
‘ಯುವತಿಯ ಕುಟುಂಬವು ತಮ್ಮ ಮಗಳು ಅಪ್ರಾಪ್ತಳೆಂದು ಪೊಲೀಸರಿಗೆ ತಿಳಿಸಿದ್ದರು. ಆದರೆ, ಆಕೆಯ ವಯಸ್ಸು 20 ದಾಟಿರುವುದು ಶಾಲಾ ಪ್ರಮಾಣಪತ್ರಗಳಲ್ಲಿ ದೃಢಪಟ್ಟಿದೆ.
ಯುವತಿ ಪತ್ತೆಯಾದ ನಂತರ, ಎರಡೂ ಕುಟುಂಬಗಳು ಅವರ ಮನವೊಲಿಸಲು ದೀರ್ಘ ಸಮಾಲೋಚನೆ ನಡೆಸಿವೆ. ಆದರೂ ಅವರು ಬೇರೆ ಬೇರೆಯಾಗಲು ಒಪ್ಪಿಲ್ಲ. ಈ ಮಧ್ಯೆ, ಯುವತಿಯರನ್ನು ಅವರ ಪಾಡಿಗೆ ಬಿಡುವಂತೆ ಪೊಲೀಸರು ಎರಡೂ ಕುಟುಂಬಗಳಿಗೆ ತಾಕೀತು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.