ಬರೇಲಿ (ಉತ್ತರ ಪ್ರದೇಶ): ಮಗನ ಹುಟ್ಟುಹಬ್ಬಕ್ಕೆ ಮದ್ಯ ಕೊಡಿಸದಿದ್ದಕ್ಕೆ ಕಬ್ಬಿಣದ ರಾಡ್‌ನಿಂದ ಹಲ್ಲೆಗೊಳಗಾಗಿದ್ದ ದಲಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಒಂದು ವಾರದ ಬಳಿಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಫರಿದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸಚಿನ್ ಎಂಬವರೇ ಮೃತ ದುರ್ದೈವಿ. ಜುಲೈ 11 ರಂದು ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಬುಧವಾರ ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರ್‌ವಾಲ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಸಚಿನ್ ಅವರ ತಾಯಿ ನೀಡಿದ ದೂರಿನ ಅನ್ವಯ 4 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಅದೇ ಊರಿನ ವಿಶಾಲ್, ಅಕ್ಕು, ಆಕಾಶ್, ಕಲ್ಲು ಎಂಬವರ ಮೇಲೆ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ.
ಮೂವರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ವಿಶಾಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ವಿವರಣೆ ನೀಡಿರುವ ಪೊಲೀಸರು, ಜುಲೈ 11ರಂದು ವಿಶಾಲ್ ಹಾಗೂ ಗುಂಪಿನವರು ಕಬ್ಬಿಣದ ರಾಡ್‌ಗಳನ್ನು ಹಿಡಿದುಕೊಂಡು ಮನೆಗೆ ನುಗ್ಗಿದ್ದರು. ಮಗನ ಹುಟ್ಟು ಹಬ್ಬದ ಪ್ರಯುಕ್ತ ಪಾರ್ಟಿ ಕೊಡಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದ ಸಂತ್ರಸ್ತ ಅದನ್ನು ತಳ್ಳಿ ಹಾಕಿದ್ದರು. ಹೀಗಾಗಿ ಮದ್ಯ ಕೊಡಿಸಬೇಕು ಎಂದು ಬೆದರಿಸಿದ್ದರು. ಅದನ್ನೂ ನಿರಾಕರಿಸಿದಾಗ, ಸಚಿನ್ ಅವರನ್ನು ಮನೆಯಿಂದ ಹೊರಗೆ ತಳ್ಳಿ, ರಾಡ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.