ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಜೆಡಿ(ಯು) ಘೋಷಿಸಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯು ಮಿತ್ರಪಕ್ಷವೆಂದು ಪರಿಗಣಿಸದಿರುವ ಬಗ್ಗೆ ಜೆಡಿ(ಯು) ಅಸಮಾಧಾನ ವ್ಯಕ್ತಪಡಿಸಿದೆ.
ಪಕ್ಷವು ಉತ್ತರ ಪ್ರದೇಶ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಜೆಡಿ(ಯು) ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಘೋಷಿಸಿದ್ದಾರೆ. ‘ನ್ಯಾಯದ ಜತೆಗೆ ಅಭಿವೃದ್ಧಿ’ ಎಂಬ ಧ್ಯೇಯದೊಂದಿಗೆ ಉತ್ತರ ಪ್ರದೇಶದಲ್ಲಿ ಬಿಹಾರ ಮಾದರಿಯ ಆಡಳಿತ ನೀಡಲು ನಮ್ಮ ಪಕ್ಷ ಉತ್ಸುಕವಾಗಿದೆ ಎಂದೂ ಅವರು ಹೇಳಿದ್ದಾರೆ.
‘ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ, ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಅನೇಕ ಬಿಜೆಪಿ ನಾಯಕರ ಜತೆ ನಮ್ಮ ಪಕ್ಷದ ಸಹೋದ್ಯೋಗಿ ಆರ್.ಸಿ.ಪಿ. ಸಿಂಗ್ ಮಾತುಕತೆ ನಡೆಸಿದ್ದರು. ಯಾವ ಹಂತದಲ್ಲಿಯೂ ಅವರೆಲ್ಲ ನಮ್ಮೊಂದಿಗೆ ಮೈತ್ರಿಯನ್ನು ನಿರಾಕರಿಸಿಲ್ಲ. ಆದರೆ, ಮೂರು ದಿನಗಳ ಹಿಂದೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದಾಗ ಅಪ್ನಾ ದಳ ಮತ್ತು ನಿಷಾದ್ ಪಕ್ಷವನ್ನು ಮಿತ್ರ ಪಕ್ಷಗಳೆಂದು ಕರೆದರು. ಜೆಡಿ(ಯು) ಅವರ ಮಿತ್ರಪಕ್ಷವಲ್ಲ ಎಂಬುದನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದರು. ಈ ಕುರಿತು ನಾವೇನೂ ಕೋಪಗೊಂಡಿಲ್ಲ. ನಾವು ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ’ ಎಂದು ತ್ಯಾಗಿ ಹೇಳಿದ್ದಾರೆ.
ಆದಾಗ್ಯೂ, ಈ ಬೆಳವಣಿಗೆಯು ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿ(ಯು) ನಡುವಣ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.