ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ಊಹಾಪೋಹಗಳಿಗೆ ವ್ಯತಿರಿಕ್ತವಾಗಿ ತಮ್ಮ ‘ಭದ್ರಕೋಟೆ ಮತ್ತು ಸುರಕ್ಷಿತ ಕ್ಷೇತ್ರ’ ಗೋರಖಪುರದಿಂದ ಸ್ಪರ್ಧಿಸಲಿದ್ದಾರೆ.
ಅಯೋಧ್ಯೆ ಅಥವಾ ಮಥುರಾದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೂಡ ಅಚ್ಚರಿಯಾಗುವ ರೀತಿಯಲ್ಲಿ ಯೋಗಿ ಅವರು ಗೋರಖಪುರ ಆಯ್ದುಕೊಂಡಿದ್ದಾರೆ.ಜನಸಂಘದ ಕಾಲದಿಂದ ಅಂದರೆ, 1967ರಿಂದ ಈವರೆಗೆ ಒಮ್ಮೆಯೂ ಈ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಘ ಅಥವಾ ಬಿಜೆಪಿ ಸೋತಿಲ್ಲ. ಹಾಲಿ ಶಾಸಕ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ಯೋಗಿ ಅವರ ನಿಷ್ಠಾವಂತ. 2002ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಘೋಷಿಸಿದೆ. ಆ ಹಿನ್ನೆಲೆಯಲ್ಲಿ ಯೋಗಿ ಅವರು ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಶನಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ‘ಗೋರಖ್‌ಪುರ ಕ್ಷೇತ್ರದಿಂದ ನನ್ನನ್ನು ಕಣಕ್ಕಿಳಿಸಿದ್ದಕ್ಕಾಗಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಆಯ್ಕೆ ಸಮಿತಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಾದರಿಯಲ್ಲಿ ಬಿಜೆಪಿ ಕೆಲಸ ಮಾಡುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.
ಫೆಬ್ರುವರಿ 10ರಂದು ಮೊದಲನೇ ಹಂತ, ಫೆ.14ರಂದು ಎರಡನೇ, ಫೆ.20ರಂದು ಮೂರನೇ, ಫೆ. 23ರಂದು ನಾಲ್ಕನೇ, ಫೆ.27ರಂದು ಐದನೇ, ಮಾರ್ಚ್ 03ರಂದು ಆರನೇ ಮತ್ತು ಮಾ. 07ರಂದು ಏಳನೇ ಹಂತದ ಮತದಾನವು ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.