ADVERTISEMENT

UP Elections: ಒಬಿಸಿ ಪಲ್ಲಟ- ಬಿಜೆಪಿ ‘ಹಿಂದುತ್ವ’ ಆಟ

‘ಹಿಂದುಳಿದವರು – ಮುಂದುವರಿದವರ ಸ್ಪರ್ಧೆ’ಗೆ ತಿರುಗೇಟು ನೀಡಲು ಆರ್‌ಎಸ್‌ಎಸ್‌ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 19:31 IST
Last Updated 21 ಜನವರಿ 2022, 19:31 IST
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗ್ರಾದ ರಾವ್ಲಿ ಮಹಾದೇವ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದರು ಪಿಟಿಐ ಚಿತ್ರ
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗ್ರಾದ ರಾವ್ಲಿ ಮಹಾದೇವ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದರು ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ‘ಹಿಂದುಳಿದವರು ಮತ್ತು ಮುಂದುವರಿದವರ ನಡುವಣ ಸ್ಪರ್ಧೆ’ ಎಂಬಂತೆ ಬಿಂಬಿತವಾಗಿರುವುದು ಬಿಜೆಪಿಯಲ್ಲಿ ಕಳವಳ ಮೂಡಿಸಿದೆ. ಬಿಜೆಪಿಯಲ್ಲಿದ್ದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಹಲವು ಮುಖಂಡರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ (ಎಸ್‌ಪಿ) ಸೇರಿರುವುದು ಇದಕ್ಕೆ ಕಾರಣ. ‘ಹಿಂದುತ್ವ
ಮತ್ತು ರಾಷ್ಟ್ರೀಯತೆ’ಯನ್ನು ಮುನ್ನೆಲೆಗೆ ತರುವ ಮೂಲಕಎಸ್‌ಪಿಯ ಕಾರ್ಯತಂತ್ರಕ್ಕೆ ತಿರುಗೇಟು ನೀಡುವ ಯೋಜನೆ
ಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್) ರೂಪಿಸಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಯೋಜನೆ ಮುಂತಾದವುಗಳನ್ನು ಇರಿಸಿಕೊಂಡು ಜನರ ಬಳಿಗೆ ಹೋಗಲು ಆರ್‌ಎಸ್‌ಎಸ್‌ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಆರ್‌ಎಸ್ಎಸ್‌ನ ಹಿರಿಯ ಮುಖಂಡರೊಬ್ಬರ ಅಧ್ಯಕ್ಷತೆಯಲ್ಲಿ ಕೆಲ ದಿನಗಳ ಹಿಂದೆ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಮಥುರಾ, ಚಿತ್ರಕೂಟ,‍ ಪ್ರಯಾಗರಾಜ್ ಸೇರಿದಂತೆ ನವೀಕರಣಗೊಂಡ ದೇವಾಲಯಗಳ ಬಗ್ಗೆ ಕಿರುಪುಸ್ತಕ ಸಿದ್ಧಪಡಿಸಲು ಆರ್‌ಎಸ್‌ಎಸ್‌ ನಿರ್ಧರಿಸಿದೆ. ಕಿರು‍ಪುಸ್ತಕವನ್ನು ಮತದಾರರಿಗೆ ಹಂಚಲಾಗುವುದು ಎಂದು ಆರ್‌ಎಸ್‌ಎಸ್‌ ಕಾರ್ಯತಂತ್ರದ ಬಗ್ಗೆ ಅರಿವು ಇರುವ ಬಿಜೆಪಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ADVERTISEMENT

ಯೋಗಿ ಆದಿತ್ಯನಾಥ ಅವರು 2017ರಲ್ಲಿ ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಪೊಲೀಸ್‌ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಣೆ ಮತ್ತು ರಾಜ್ಯದಲ್ಲಿ ನಡೆಸಲಾದ ‘ಕಂವಡ್‌ ಯಾತ್ರೆ’ಗಳ ಬಗ್ಗೆಯೂ ಕಿರುಪುಸ್ತಕದಲ್ಲಿ ಉಲ್ಲೇಖ ಇರಲಿದೆ.

‘ಬಿಜೆಪಿಯೇತರ ಕೆಲವು ಪಕ್ಷಗಳು ನಕಲಿ ಹಿಂದುತ್ವದ ಮೊರೆ ಹೋಗಿವೆ. ಆರ್‌ಎಸ್‌ಎಸ್‌ ಕಾರ್ಯಕರ್ತರು ಅದಕ್ಕೂ ಬೆಳಕು ಚೆಲ್ಲಲಿದ್ದಾರೆ’ ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ.

ಈ ಕಿರುಪುಸ್ತಕದ ಮೂಲಕ, ಹಿಂದುತ್ವದ ವ್ಯಾಪ್ತಿ ವಿಸ್ತಾರದ ಪ್ರಯತ್ನವೂ ನಡೆಯಲಿದೆ. ಈ ಕಿರುಪುಸ್ತಕದಲ್ಲಿ ಬೌದ್ಧ, ಜೈನ ಮತ್ತು ಸಿಖ್‌ ಧರ್ಮಗಳನ್ನೂ ಹಿಂದುತ್ವಕ್ಕೆ ಸೇರಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಧರ್ಮದ ಜನರ ಬೆಂಬಲ ಪಡೆಯಲು ಕಿರುಪುಸ್ತಕ ನೆರವಾಗಬಹುದು ಎಂಬ ಭಾವನೆ ಆರ್‌ಎಸ್‌ಎಸ್‌ನಲ್ಲಿ ಇದೆ. ಪರಿಶಿಷ್ಟ ಜಾತಿಯ ಗಣನೀಯ ಪ್ರಮಾಣದ ಜನರು ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದಾರೆ. ಹಾಗಾಗಿ, ಈ ಕಾರ್ಯತಂತ್ರ ಮಹತ್ವದ್ದು ಎನಿಸಿದೆ.

ಪ್ರತಿಸ್ಪರ್ಧಿ ಪಕ್ಷಗಳು ಪ‍್ರತಿಪಾದಿಸುತ್ತಿರುವ ‘ರಾಷ್ಟ್ರೀಯತೆ’ಯನ್ನು ಕಿರುಪುಸ್ತಕದಲ್ಲಿ ಪ್ರಶ್ನಿಸಲಾಗುವುದು. ಹಾಗೆಯೇ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದತಿ, ನಿರ್ದಿಷ್ಟ ದಾಳಿ, ಕೆಲವು ಎನ್‌ಜಿಒಗಳಿಗೆ ವಿದೇಶಿ ದೇಣಿಗೆ ರದ್ದತಿಯಂತಹ ವಿಚಾರಗಳು ಕೂಡ ಕಿರುಪುಸ್ತಕದಲ್ಲಿ ಚರ್ಚೆ ಒಳಗಾಗಲಿವೆ.

ರಾಜಕೀಯವಾಗಿ ಅತ್ಯಂತ ಮಹತ್ವದ್ದಾದ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪ‍ಕ್ಷದ ಜಾತಿ ಸಮೀಕರಣವು ಬೀರುವ ಪರಿಣಾಮವನ್ನು ಕನಿಷ್ಠಗೊಳಿಸುವುದು ಈ ಕಾರ್ಯತಂತ್ರದ ಉದ್ದೇಶ ಎಂದು ಬಿಜೆಪಿಯ ಮುಖಂಡ ಹೇಳಿದ್ದಾರೆ.

ಬಿಜೆಪಿ ತೊರೆದು ಎಸ್‌ಪಿ ಸೇರಿರುವ ಒಬಿಸಿ ಮುಖಂಡರು, ಬಿಜೆಪಿಯನ್ನು ‘ಒಬಿಸಿ ವಿರೋಧಿ’ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಒಬಿಸಿಗೆ ಸೇರಿದ ಜಾತಿಗಳ ಬೆಂಬಲವು ಬಿಜೆಪಿಯ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಒಬಿಸಿ: ಅಪ್ನಾದಳ, ನಿಶಾದ್ ಪಕ್ಷ ನೆಚ್ಚಿಕೊಂಡ ಬಿಜೆಪಿ

ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಹಲವು ಮುಖಂಡರು ಬಿಜೆಪಿಯನ್ನು ತೊರೆದ ನಂತರ ಪಕ್ಷವು, ಈ ವರ್ಗಗಳ ಮತಕ್ಕಾಗಿ ಅಪ್ನಾದಳ ಮತ್ತು ನಿಶಾದ್ ಪಕ್ಷವನ್ನು ಅವಲಂಬಿಸಿದೆ. ಉತ್ತರ ಪ್ರದೇಶದ ಪೂರ್ವಾಂಚಲದಲ್ಲಿ ಚುನಾವಣೆ ಎದುರಿಸಲು ಈ ಪಕ್ಷಗಳನ್ನೇ ಬಿಜೆಪಿ ನೆಚ್ಚಿಕೊಂಡಿದೆ. ಆದರೆ ಒಬಿಸಿ ಸಮುದಾಯದ ಬೇರೆ ನಾಯಕರು ಪಕ್ಷ ತೊರೆದ ಕಾರಣ ಆದ ನಷ್ಟವನ್ನು, ಈ ಪಕ್ಷಗಳು ತುಂಬಿಕೊಡುತ್ತವೆಯೇ ಎಂಬುದು ಅಸ್ಪಷ್ಟವಾಗಿದೆ.

ರಾಜ್ಯದ ಕುಮ್ರಿ ಸಮುದಾಯದ ಸಂಪೂರ್ಣ ಬೆಂಬಲ ತನಗಿದೆ ಎಂದು ಅಪ್ನಾದಳವು ಹೇಳಿಕೊಂಡಿದೆ. ಆದರೆ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿದೆ. ಪಕ್ಷದ ಮುಖ್ಯಸ್ಥೆ ಅನುಪ್ರಿಯಾ ಪಟೇಲ್ ಅವರ ತಾಯಿ ಕೃಷ್ಣಾ ಪಟೇಲ್‌ ಅವರು ತಮ್ಮದೇ ಪ್ರತ್ಯೇಕ ಪಕ್ಷ ಸ್ಥಾಪಿಸಿ, ಸಮಾಜವಾದಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ಈ ಸಮುದಾಯದ ಮತಗಳು ವಿಭಜನೆಯಾಗಲಿವೆ.

ಅಂಬಿಗ ಮತ್ತು ಮೀನುಗಾರರ ಸಮುದಾಯದ ನಿಶಾದ್ ಪಕ್ಷವು ರಾಜ್ಯದ ಎಲ್ಲೆಡೆ ಸಮುದಾಯದ ಬೆಂಬಲ ಹೊಂದಿದೆ ಎಂದು ಹೇಳಿಕೊಂಡಿದೆ. ಆದರೆ ಪೂರ್ವಾಂಚಲದಲ್ಲಿ ಮಾತ್ರವೇ ಪಕ್ಷದ ಪ್ರಭಾವವಿದೆ. ರಾಜ್ಯದ ಬೇರೆಡೆ ಸಮುದಾಯದ ಹಲವು ನಾಯಕರು ರಾಜಕೀಯ ಪ್ರವೇಶಿಸಿದ್ದಾರೆ. ಮುಖೇಶ್ ಸಾಹ್ನಿ ನೇತೃತ್ವದ ವಿಕಾಸಶೀಲ ಇನ್ಸಾನ್ ಪಕ್ಷವು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ನಿಶಾದ್‌ ಪಕ್ಷ ಮತ್ತು ವಿಕಾಸಶೀಲ ಇನ್ಸಾನ್‌ ಪಕ್ಷದ ಜತೆಗೆ ಕ್ಷೇತ್ರ ಹಂಚಿಕೆ ಬಗ್ಗೆ ಸಭೆ ನಡದಿತ್ತು. ಆದರೆ ಅಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಈ ಪಕ್ಷವೂ ಸ್ವತಂತ್ರವಾಗಿ ಕಣಕ್ಕೆ ಇಳಿದರೆ ಈ ಸಮುದಾಯದ ಮತಗಳೂ ವಿಭಜನೆಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.