ADVERTISEMENT

ಪೊಲೀಸರ ಹತ್ಯೆ ಪ್ರಕರಣ: ರೌಡಿ ವಿಕಾಸ್‌ ದುಬೆಯ ಮತ್ತಿಬ್ಬರು ಸಹಚರರ ಎನ್‌ಕೌಂಟರ್

ಏಜೆನ್ಸೀಸ್
Published 9 ಜುಲೈ 2020, 6:07 IST
Last Updated 9 ಜುಲೈ 2020, 6:07 IST
   

ಕಾನ್ಪುರ: ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕುಖ್ಯಾತ ರೌಡಿ ವಿಕಾಸ್‌ ದುಬೆಯ ಇಬ್ಬರು ಸಹಚರರು ಗುರುವಾರ ಬೆಳಿಗ್ಗೆ ಪೊಲೀಸ‌ರ ಗುಂಡಿಗೆ ಬಲಿಯಾಗಿದ್ದಾರೆ. ಇದಾದ ಕೆಲ ಗಂಟೆಗಳಲ್ಲೇ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದುಬೆಯನ್ನು ಬಂಧಿಸಲಾಗಿದೆ.

ಇಂದು ಹತ್ಯೆಯಾದವರಲ್ಲಿ ಒಬ್ಬನಾದ ಪ್ರಭಾತ್‌ ಎಂಬಾತನನ್ನು ದೆಹಲಿಗೆ ಹತ್ತಿರದಲ್ಲಿರುವ ಹರಿಯಾಣದ ಫರೀದಾಬಾದ್‌ನಲ್ಲಿ ಮಂಗಳವಾರ ಬಂಧಿಸಲಾಗಿತ್ತು. ಮತ್ತೊಬ್ಬ ಬಂಧಿತನೊಂದಿಗೆ ಆತನನ್ನುಕಾನ್ಪುರಕ್ಕೆ ಕರೆದೊಯ್ಯುವ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

‘ಪ್ರಭಾತ್‌ ಜೊತೆಗಿದ್ದ ಪೊಲೀಸರು ವ್ಯಾನ್‌ನ ಚಕ್ರ ಬದಲಿಸಿಲು ಕೆಳಗಿಳಿದಿದ್ದರು. ಈ ವೇಳೆ ಪೊಲೀಸರಿಂದ ಪಿಸ್ತೂಲ್‌ ಕಸಿದುಕೊಂಡ ಪ್ರಭಾತ್‌, ಪೊಲೀಸರತ್ತ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಪ್ರತಿದಾಳಿ ನಡೆಸಲಾಯಿತು. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದೆವು. ಆದಾಗ್ಯೂ ಮೃತಪಟ್ಟಿದ್ದಾನೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಪ್ರಶಾಂತ್‌ ಕುಮಾರ್‌ ಹೇಳಿದ್ದಾರೆ.

ಮತ್ತೊಬ್ಬ ಬವುಮಾ ದುಬೆ ಅಲಿಯಾಸ್‌ ಪ್ರವೀಣ್‌ ಎಂಬಾತ ರಾಜಧಾನಿ ಲಖನೌನಿಂದ 120 ಕಿ.ಮೀ ದೂರದಲ್ಲಿರುವಇಟುವಾದಲ್ಲಿ ಎನ್‌ಕೌಂಟರ್ ವೇಳೆ ಬಲಿಯಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ₹ 50 ಸಾವಿರ ನೀಡುವುದಾಗಿ ಸರ್ಕಾರ ಘೋಷಿಸಿತ್ತು.

‘ಸ್ವಿಫ್ಟ್‌ ಡಿಸೈರ್ ಕಾರೊಂದರಲ್ಲಿ ಲೂಟಿ ಮಾಡಿ ಮುಂಜಾನೆ 3 ಗಂಟೆ ಸುಮಾರಿಗೆ ಸ್ಕಾರ್ಪಿಯೊದಲ್ಲಿ ಪರಾರಿಯಾಗುತ್ತಿದ್ದಶಸ್ತ್ರ ಸಜ್ಜಿತ ನಾಲ್ವರನ್ನು ಪೊಲೀಸರು ಸುಮಾರು ಒಂದು ಗಂಟೆವರೆಗೂ ತಡೆದಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿ ವೇಳೆ ಅಪರಿಚನೊಬ್ಬನಿಗೆ ಗುಂಡು ತಗುಲಿತ್ತು. ಆತ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಆಕಾಶ್‌ ತೋಮರ್‌ ತಿಳಿಸಿದ್ದಾರೆ.

ಬಳಿಕ ಆತ ದುಬೆ ಸಹಾಯಕ ಪ್ರವೀಣ್‌ ಎಂದು ಗುರುತಿಸಲಾಗಿದೆ.ಉಳಿದ ಮೂವರು ತಪ್ಪಿಸಿಕೊಂಡಿದ್ದಾರೆ. ಎನ್‌ಕೌಂಟರ್‌ ಬಳಿಕ ಒಂದು ಪಿಸ್ತೂಲ್‌, ಡಬಲ್‌ ಬ್ಯಾರೆಲ್‌ ಗನ್‌ ಮತ್ತು ಕಾರ್ಟ್ರಿಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದವಾರ ರೌಡಿ ವಿಕಾಸ್‌ ದುಬೆಯನ್ನು ಬಂಧಿಸಲು ಹೋದಾಗ ನಡೆದ ಗುಂಡಿನ ಚಕಮಕಿ ವೇಳೆ ಕಾನ್ಪುರ ಜಿಲ್ಲೆಯ ಎಂಟು ಮಂದಿ ಪೊಲೀಸರುಹತ್ಯೆಯಾಗಿದ್ದರು. ಮೃತಪಟ್ಟವರಲ್ಲಿ ಒಬ್ಬ ಡಿವೈಎಸ್‌ಪಿ, ಮೂವರು ಸಬ್‌ಇನ್ಸ್‌ಪೆಕ್ಟರ್‌ಗಳೂ ಸೇರಿದ್ದರು. ಇದೇ ವೇಳೆಒಬ್ಬ ನಾಗರಿಕ ಮತ್ತು ಆರು ಪೊಲೀಸರಿಗೆಗಾಯಗಳಾಗಿದ್ದವು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಮೀರಪುರ ಜಿಲ್ಲೆಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ್ದ ವಿಶೇಷ ಕಾರ್ಯಪಡೆ,ದುಬೆಯ ಸಹಚರನೊಬ್ಬನನ್ನು ಹೊಡೆದುರುಳಿಸಿ, 6 ಜನರನ್ನು ಬಂಧಿಸಿತ್ತು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.