ಲಖನೌ: ಸರ್ಕಾರಿ ಅಧಿಕಾರಿಯೊಬ್ಬರ 22 ವರ್ಷದ ಮಗಳ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಮೂವರು ಅತ್ಯಾಚಾರವೆಸಗಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಯುವತಿಯು ನೀಡಿರುವ ದೂರಿನ ಪ್ರಕಾರ, 'ಆಕೆ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ಆಸ್ಪತ್ರೆಯ ಮನೋಶಾಸ್ತ್ರ ವಿಭಾಗಕ್ಕೆ ಡಿಸೆಂಬರ್ 5ರಂದು ಹೋಗಿದ್ದರು. ಅವರು ಆಸ್ಪತ್ರೆಗೆ ಹೋದಾಗ ಸತ್ಯಂ ಮಿಶ್ರಾ ಎಂಬಾತನ ಅಂಗಡಿಗೆ ತೆರಳಿ, ಚಹಾ ಕುಡಿಯುತ್ತಿದ್ದರು. ಆ ದಿನ (ಡಿ.5 ರಂದು) ಮೊಬೈಲ್ ಚಾರ್ಜ್ ಮಾಡಿಕೊಡುವಂತೆ ಸತ್ಯಂ ಮಿಶ್ರಾ ಬಳಿ ಕೇಳಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.
ಮುಂದುವರಿದು, 'ಸತ್ಯಂ ಮಿಶ್ರಾ, ಯುವತಿನ್ನು ಹೊರಗೆ ಆ್ಯಂಬುಲೆನ್ಸ್ ಪಾರ್ಕ್ ಮಾಡಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ. ಮೊಬೈಲ್ ಚಾರ್ಜ್‌ಗೆ ಹಾಕಿದ್ದ ಆ್ಯಂಬುಲೆನ್ಸ್ ಸ್ವಲ್ಪ ಹೊತ್ತಿನ ಬಳಿಕ ಹೊರಟುಹೋಗಿತ್ತು. ಆಸ್ಪತ್ರೆ ಅವರಣದಲ್ಲಿ ಇಬ್ಬರೂ ಆ್ಯಂಬುಲೆನ್ಸ್‌ಗಾಗಿ ಹುಡುಕಾಟ ನಡೆಸಿದ್ದರು' ಎಂದಿದ್ದಾರೆ.
'ಬಳಿಕ ಯುವತಿಯನ್ನು ಬಾರಾಬಂಕಿಯಲ್ಲಿರುವ ಸಫೇದಾಬಾದ್ ಪ್ರದೇಶದ ಡಾಬಾಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಇನ್ನಿಬ್ಬರು ಆರೋಪಿಗಳು ಅಲ್ಲಿದ್ದರು. ಮೂವರೂ ಸೇರಿ ಅಮಲೇರಿಸುವ ಪದಾರ್ಥ ಬೆರೆಸಿದ ಪಾನೀಯ ಕುಡಿಸಿದ್ದರು. ನಂತರ ಕಾರಿನಲ್ಲೇ ಅತ್ಯಾಚಾರವೆಸಗಿ, ಆಕೆಯನ್ನು ಇಂದಿರಾ ನಗರ ಪ್ರದೇಶದಲ್ಲಿ ಬಿಟ್ಟುಹೋಗಿದ್ದರು' ಎಂದು ವಿವರಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಾಝಿರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್‌ಐಆರ್ ದಾಖಲಾಗಿದೆ.
ಇನ್ನಿಬ್ಬರು ಆರೋಪಿಗಳನ್ನು ಸುಹೈಲ್ ಮತ್ತು ಮೊಹಮ್ಮದ್ ಅಸ್ಲಾಮ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಅಪರಾಧಕ್ಕೆ ಬಳಸಿದ ಕಾರು, ಎರಡು ಮೊಬೈಲ್ ಫೋನ್‌ಗಳು ಮತ್ತು ₹ 19,830 ನಗದು ವಶಪಡಿಸಿಕೊಳ್ಳಾಗಿದೆ. ತನಿಖೆ ಮುಂದುವರಿದಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.