ಮುಜಾಫರ್‌ನಗರ: ಈಗಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯೊಬ್ಬನಿಗೆ ಇಲ್ಲಿನ ನ್ಯಾಯಾಲಯ ಮತ್ತೊಮ್ಮೆ ಜೀವಾವಧಿ ಶಿಕ್ಷೆ ವಿಧಿಸಿದೆ. 2011ರಲ್ಲಿ ಮುಜಾಫರ್‌ನಗರ ನ್ಯಾಯಾಲಯದ ಆವರಣದಲ್ಲಿ ಕೊಲೆ ಆರೋಪಿಗಳಿಬ್ಬರಿಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಶಹನವಾಜ್ ಎಂಬಾತನಿಗೆ ಎರಡನೇ ಬಾರಿ ಶಿಕ್ಷೆ ಪ್ರಕಟಿಸಲಾಗಿದೆ.
ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು.
'2010ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳಾದ ಜಮೀಲ್ ಹಾಗೂ ಆತನ ಮಗ ಸರ್ಫರಾಜ್ ಅವರನ್ನು 2011ರ ಜೂನ್ 1ರಂದು ವಿಚಾರಣೆ ಸಲುವಾಗಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆರೋಪಿಗಳಿದ್ದ ವಾಹನ ನ್ಯಾಯಾಲಯದ ಆವರಣದಲ್ಲಿ ನಿಲ್ಲುತ್ತಿದ್ದಂತೆ, ಶಹನವಾಜ್ ಹರಿತವಾದ ಆಯುಧದಿಂದ ದಾಳಿ ಮಾಡಿದ್ದ. ಮತ್ತೊಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಹನವಾಜ್ ಸದ್ಯ ಶಹರಾನ್‌ಪುರ ಜೈಲಿನಲ್ಲಿದ್ದಾನೆ. ಇದೀಗ ಮತ್ತೆ ಆತನಿಗೆ ನ್ಯಾಯಾಲಯ ಜೀವಾವಧಿ ವಿಧಿಸಿದೆ' ಎಂದು ವಕೀಲ ಪರ್ವಿಂದರ್ ಸಿಂಗ್ ತಿಳಿಸಿದ್ದಾರೆ.
'ಒಬ್ಬನೇ ಅಪರಾಧಿಗೆ ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿರುವುದು ಮುಜಾಫರ್‌ನಗರದ ಇತಿಹಾಸದಲ್ಲಿ ಇದೇ ಮೊದಲು' ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.