ಲಖನೌ: ಗುರುವಾರ ರಾತ್ರಿ ಉತ್ತರ ಪ್ರದೇಶದ ಬಹ್ರೆಚ್ ಜಿಲ್ಲೆಯ ಅಹಿರನ್‌ಪೂರ್ವ ಗ್ರಾಮದಲ್ಲಿ ವಿಶೇಷ ಪೊಲೀಸ್ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಕುಖ್ಯಾತ ರೌಡಿ ಪನ್ನಾ ಯಾದವ್ ಸಾವನ್ನಪ್ಪಿದ್ದಾನೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್‌ಪುರ ನಿವಾಸಿ ಪನ್ನಾ ಯಾದವ್ ಕೊಲೆ, ದೊಂಬಿ ಮತ್ತು ಹಫ್ತಾವಸೂಲಿ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋರಖ್‌ಪುರ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ, 'ಗುರುವಾರ ರಾತ್ರಿ ಬಹ್ರೆಚ್ ಜಿಲ್ಲೆಯ ಅಹಿರನ್‌ಪೂರ್ವ ಗ್ರಾಮದಲ್ಲಿ ಕುಖ್ಯಾತ ರೌಡಿ ಪನ್ನಾ ಯಾದವ್ ಪೊಲೀಸರ ಗುಂಡಿಗೆ ಗಾಯಗೊಂಡಿದ್ದು, ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪನ್ನಾ ಯಾದವ್ ಸಾವಿಗೀಡಾಗಿದ್ದಾನೆ' ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ನಾಲ್ಕನೇ ಪೊಲೀಸ್ ಎನ್‌ಕೌಂಟರ್ ಇದಾಗಿದೆ. ವಿಕಾಸ್ ದುಬೆ ಉತ್ತರ ಪ್ರದೇಶ ಪೊಲೀಸರ ಗುಂಡಿಗೆ ಶುಕ್ರವಾರ ಬೆಳಿಗ್ಗೆ ಬಲಿಯಾಗಿದ್ದಾನೆ. ದುಬೆಯ ಇಬ್ಬರು ಸಹಚರರನ್ನು ಉತ್ತರ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಗುರುವಾರ ಹತ್ಯೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.