ಅಹಮದಾಬಾದ್: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಬಿಎಸ್‌ಪಿ ಶಾಸಕರು ಸೇರಿದಂತೆ ಪ್ರಭಾವಶಾಲಿ ಬ್ರಾಹ್ಮಣ ಮುಖಂಡರು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ(ಎಸ್‌ಪಿ)ಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರ ಗೋರಖಪುರದ ಖಲಿಲಾಬಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿಗ್ವಿಜಯ್ ನಾರಾಯಣ್ ಚೌಬೆ ಅವರು ಉತ್ತರ ಪ್ರದೇಶದ ಪೂರ್ವ ಭಾಗದ ಹಲವು ಬ್ರಾಹ್ಮಣ ಮುಖಂಡರ ಜೊತೆ ಸಮಾಜವಾದಿ ಪಕ್ಷ ಸೇರಿದ್ದಾರೆ.
ಕುರ್ಮಿ ಸಮುದಾಯದ ಪ್ರಮುಖ ನಾಯಕಿ, ಬಹ್ರೈಚ್ ಜಿಲ್ಲೆಯ ನಾನಪಾರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮಾಧುರಿ ವರ್ಮಾ ಅವರು ಎಸ್‌ಪಿ ಸೇರ್ಪಡೆಗೊಂಡಿದ್ದಾರೆ.
ರಾಕೇಶ್ ಪಾಂಡೆ:
ಬಿಎಸ್‌ಪಿ ಲೋಕಸಭಾ ಸದಸ್ಯ ರಿತೇಶ್ ಪಾಂಡೆ ಅವರ ತಂದೆ, ಮಾಜಿ ಸಂಸದ ರಾಕೇಶ್ ಪಾಂಡೆ ಅವರು ಎಸ್‌ಪಿ ಸೇರ್ಪಡೆಗೊಂಡಿದ್ದಾರೆ. ಅಂಬೇಡ್ಕರ್ ನಗರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಕೇಶ್ ಪಾಂಡೆ ಅವರು ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶದ ಪ್ರಮುಖ ಬ್ರಾಹ್ಮಣ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ರಾಕೇಶ್ ಅವರು ಪಕ್ಷ ತೊರೆದಿರುವುದು ಬಿಎಸ್‌ಪಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. 2014ರಲ್ಲಿ ರಾಕೇಶ್ ಪಾಂಡೆ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡ ಬಳಿಕ ಅವರ ಮಗ ರಿತೇಶ್ ಪಾಂಡೆ ಅವರನ್ನು ಬಿಎಸ್‌ಪಿ ಕಣಕ್ಕೆ ಇಳಿಸಿತ್ತು.
ತಿವಾರಿ ಮತ್ತು ಪುತ್ರರು:
ಕೆಲವು ದಿನಗಳ ಹಿಂದೆ ಪೂರ್ವಾಂಚಲ ಪ್ರದೇಶದ ಪ್ರಭಾವಿ ಬ್ರಾಹ್ಮಣ ಮುಖಂಡ ಮುಖಂಡ ಮತ್ತು 6 ಬಾರಿ ಶಾಸಕರಾಗಿರುವ ಪಂಡಿತ್ ಹರಿ ಶಂಕರ್ ತಿವಾರಿ ಅವರು ತಮ್ಮ ಇಬ್ಬರು ಪುತ್ರರಾದ ಭೀಷ್ಮ ಶಂಕರ್ ಮತ್ತು ವಿನಯ್ ಶಂಕರ್ ಜೊತೆ ಎಸ್‌ಪಿ ಸೇರಿದ್ದಾರೆ. ಇಬ್ಬರಲ್ಲಿ ಓರ್ವ ಬಿಎಸ್‌ಪಿ ಶಾಸಕ ಹಾಗೂ ಮತ್ತೊಬ್ಬ ಮಾಜಿ ಸಂಸದ.
ಮತ್ತೊಬ್ಬ ಮಾಜಿ ಶಾಸಕ ಮತ್ತು ಬ್ರಾಹ್ಮಣ ಮುಖಂಡರಾಗಿ ಗುರುತಿಸಿಕೊಂಡಿರುವ ಬ್ರಿಜೇಶ್ ಮಿಶ್ರಾ ಅವರು ತಮ್ಮ ಬೆಂಬಲಿಗರ ಜೊತೆ ಎಸ್‌ಪಿಗೆ ಸೇರ್ಪಡೆಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.