ADVERTISEMENT

ಉತ್ತರ ಪ್ರದೇಶ | ದೀಪಾವಳಿಗೂ ಮುನ್ನ 'ವಂತಂಗಿಯಾ ಉತ್ಸವ': ಏನಿದರ ವಿಶೇಷ?

ಪಿಟಿಐ
Published 23 ಅಕ್ಟೋಬರ್ 2024, 6:10 IST
Last Updated 23 ಅಕ್ಟೋಬರ್ 2024, 6:10 IST
<div class="paragraphs"><p>ಯೋಗಿ ಆದಿತ್ಯನಾಥ</p></div>

ಯೋಗಿ ಆದಿತ್ಯನಾಥ

   

ಪಿಟಿಐ ಚಿತ್ರ

ಗೊಂಡಾ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ 'ಶೂನ್ಯ ಬಡತನ' ದೂರದೃಷ್ಟಿಯಂತೆ ವಂತಂಗಿಯಾ ಸಮುದಾಯದ ಕುಟುಂಬಗಳಿಗೆ ದೀಪಾವಳಿಗೆ ವಿಶೇಷ ಉಡುಗೊರೆ ನೀಡಲು ಗೊಂಡಾ ಜಿಲ್ಲಾಡಳಿತವು ಸಜ್ಜಾಗಿದೆ. ಇಲ್ಲಿನ ಮಹೇಶಪುರ ಮತ್ತು ರಾಮಗಢ ಗ್ರಾಮಗಳಲ್ಲಿ ದೀಪಾವಳಿಗೂ ಮುನ್ನ ವಿಶೇಷ ಉತ್ಸವ ಆಯೋಜಿಸಲು ಸಿದ್ಧತೆ ನಡೆಸಿದೆ.

ADVERTISEMENT

ಅಕ್ಟೋಬರ್‌ 27ರಂದು 'ವಂತಂಗಿಯಾ ಮಹೋತ್ಸವ 2.0' ನಡೆಸಲು ಉದ್ದೇಶಿಸಲಾಗಿದೆ. ಹಬ್ಬ ಆಚರಿಸುವುದಷ್ಟೇ ಇದರ ಉದ್ದೇಶವಲ್ಲ. ಬದಲಾಗಿ, ಈ ಸಮುದಾಯದ ಜೀವನ ಮಟ್ಟವನ್ನು ಸುಧಾರಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ವಂತಂಗಿಯಾ ಉತ್ತರ ಪ್ರದೇಶದ ಅರಣ್ಯಗಳಲ್ಲಿ ವಾಸಿಸುವ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯವಾಗಿದೆ.

'ತರಬ್‌ಗಂಜ್‌ ತಾಲ್ಲೂಕು ವ್ಯಾಪ್ತಿಗೆ ಬರುವ ಮಹೇಶಪುರ ಮತ್ತು ರಾಮಗಢ ಗ್ರಾಮಗಳಲ್ಲಿರುವ ವಂತಂಗಿಯಾ ಸಮುದಾಯದ ಎಲ್ಲ ಕುಟುಂಬದವರಿಗೆ ಉತ್ಸವದ ಅಂಗವಾಗಿ ಬಟ್ಟೆ, ಸೇರಿದಂತೆ ಇತರ ಅಗತ್ಯ ಸಾಮಗ್ರಿಗಳನ್ನು ಉಡುಗೊರೆ ರೂಪದಲ್ಲಿ ವಿತರಿಸಲಾಗುವುದು' ಎಂದು ಗೊಂಡಾ ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದ್ದಾರೆ.

'ಉತ್ಸವಕ್ಕೂ ಮುನ್ನ, ಅಕ್ಟೋಬರ್‌ 24 ಮತ್ತು 25ರಂದು ವಿಶೇಷ ಸ್ವಚ್ಛತಾ ಅಭಿಯಾನ ಮತ್ತು ಉಚಿತ ಆರೋಗ್ಯ ಶಿಬಿರ ನಡೆಸಲಾಗುವುದು. ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಡಲಾಗುವುದು' ಎಂದಿರುವ ನೇಹಾ, 'ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ಹಾಕಿಕೊಂಡಿದ್ದೇವೆ' ಎಂದು ಹೇಳಿದ್ದಾರೆ.

'ವಂತಂಗಿಯಾ ಉತ್ಸವವನ್ನು 2023ರಲ್ಲಿ ಆರಂಭಿಸಿದ್ದೆ. ಈ ವರ್ಷ ಅದನ್ನು ಮುಖ್ಯಮಂತ್ರಿಗಳ 'ಶೂನ್ಯ ಬಡತನ' ದೂರದೃಷ್ಟಿಯಂತೆ ಮುನ್ನಡೆಸುತ್ತಿದ್ದೇವೆ. ಈ ಕುಟುಂಬಗಳಿಗೆ ಉಡುಗೊರೆಗಳನ್ನು ನೀಡುವುದಷ್ಟೇ ಅಲ್ಲ, ಬಡತನ ಮುಕ್ತ ಕಾರ್ಯಕ್ರಮಗಳೊಂದಿಗೆ ಸಂಪರ್ಕಿಸುವುದು ನಮ್ಮ ಉದ್ದೇಶವಾಗಿದೆ. ಅವರ ಆರ್ಥಿಕ ಸ್ಥಿತಿಗತಿ ಸುಧಾರಿಸುವ ಮೂಲಕ ಘನತೆ ಹಾಗೂ ಸಂಭ್ರಮದಿಂದ ದೀಪಾವಳಿ ಆಚರಿಸುವಂತೆ ಮಾಡುತ್ತೇವೆ' ಎಂದಿದ್ದಾರೆ.

'ಜಿಲ್ಲಾ ಪಂಚಾಯತ್‌ ರಾಜ್‌ ಅಧಿಕಾರಿ ಮತ್ತು ನವಾಬಗಂಜ್‌ ಕ್ಷೇತ್ರ ಅಭಿವೃದ್ಧಿ ಅಧಿಕಾರಿಗೆ ಕಾರ್ಯಕ್ರಮದ ಉಸ್ತುವಾರಿ ನೀಡಲಾಗಿದೆ. ಉತ್ಸವ ಸುಗಮವಾಗಿ ನಡೆಯುವಂತೆ ಮತ್ತು ಪ್ರತಿಯೊಬ್ಬರೂ ಸೌಲಭ್ಯ ತಲುಪುವಂತೆ ನೋಡಿಕೊಳ್ಳುವ ಹೊಣೆ ಅವರದ್ದು' ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.