ಮೊರಾದಾಬಾದ್: ಈ ಪ್ರದೇಶದಲ್ಲಿ ಕೋಮು ಸಂಘರ್ಷವನ್ನು ಸೃಷ್ಟಿಸುವ ಸಲುವಾಗಿ ಗೋ ಹತ್ಯೆ ನಡೆಸಿದ ಆರೋಪದ ಮೇಲೆ, ವಿಶ್ವ ಹಿಂದೂ ಪರಿಷತ್‌ನ ಮೊರಾದಾಬಾದ್ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಹಸುವನ್ನು ಕದ್ದು, ಅರಣ್ಯ ಪ್ರದೇಶದಲ್ಲಿ ಕಡಿದಿದ್ದಾರೆ ಎನ್ನಲಾಗಿದೆ. ವಿಎಚ್‌ಪಿ ನಾಯಕ ಮೋನು ಬಿಷ್ಣೋಯಿ, ಆತನ ಸಹಚರರಾದ ರಮಣ್ ಚೌಧರಿ, ರಾಜೀವ್ ಚೌಧರಿ ಹಾಗೂ ಶಾಬುದ್ದೀನ್ ಎಂಬವರನ್ನು ಬುಧವಾರ ಬಂಧಿಸಲಾಗಿದೆ.
ಪ್ರಕರಣದ ಕುರಿತು ಮಾತನಾಡಿರುವ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್‌ಎಸ್‌ಪಿ) ಹೇಮರಾಜ್ ಮೀನಾ, 'ಈ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಸುವುದಕ್ಕಾಗಿ ಮತ್ತು ಛಜ್ಲೆಟ್ ಠಾಣಾಧಿಕಾರಿಯನ್ನು ಗುರಿಯಾಗಿಸಿಕೊಂಡು ಸೂಕ್ತ ಯೋಜನೆಯೊಂದಿಗೆ ಈ ಕೃತ್ಯ ನಡೆಸಲಾಗಿದೆ' ಎಂದಿದ್ದಾರೆ.
ಹಸುವಿನ ಕಳೇಬರ ಜನವರಿ 16ರಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ, ಶವವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿತ್ತು.
'ಹಸುವಿನ ಕಳೇಬರದ ಬಗ್ಗೆ ಬಿಷ್ಣೋಯಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಮೃತ ಹಸುವಿನ ಪಕ್ಕದಲ್ಲೇ ಬಟ್ಟೆಯನ್ನು ಇಡಲಾಗಿತ್ತು. ಅದರಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರ ಫೋಟೊ ಮತ್ತು ಫೋನ್ ನಂಬರ್ ಸಿಕ್ಕಿತ್ತು. ಬಳಿಕ, ಸಂಬಂಧಿತ ವ್ಯಕ್ತಿಯನ್ನು ಕರೆದು ವಿಚಾರಣೆ ನಡೆಸಲಾಗಿತ್ತು' ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದಾಗಲೇ, ಅರಣ್ಯ ಪ್ರದೇಶದಲ್ಲಿ ಗೋ ಹತ್ಯೆ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ಬಿಷ್ಣೋಯಿ ಜನವರಿ 28ರಂದು ಪೊಲೀಸರಿಗೆ ನೀಡಿದ್ದ. ಜೊತೆಗೆ ಹಸುವಿನ ಕಳೇಬರದ ವಿಡಿಯೊವನ್ನೂ ತೋರಿಸಿದ್ದ.
'ಅದರಂತೆ, ಗೋ ಹತ್ಯೆ ಸಂಬಂಧ ಶಾಬುದ್ದೀನ್ ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದೆವು. ತಾನು ಸೂಚಿಸಿದ ಸ್ಥಳದಲ್ಲಿ ಜನವರಿ 16ರಂದು ಹಸುವಿನ ಕಳೇಬರವನ್ನು ಇಡಬೇಕು ಮತ್ತು ಜನವರಿ 28ರಂದು ಹಸುವೊಂದನ್ನು ಕದ್ದು, ಹತ್ಯೆ ಮಾಡಬೇಕು ಎಂದು ಮೋನು ಬಿಷ್ಣೋಯಿ ತನಗೆ ಹಣ ನೀಡಿದ್ದಾಗಿ ಶಾಬುದ್ದೀನ್ ಹೇಳಿಕೆ ನೀಡಿದ್ದ. ಛಜ್ಲೆಟ್ ಠಾಣಾಧಿಕಾರಿಯೊಂದಿಗೆ ಮನಸ್ತಾಪ ಹೊಂದಿದ್ದ ಮೋನು, ಈ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಬಯಸಿದ್ದ. ಗಲಭೆ ನಡೆಸುವುದು ಹಾಗೂ ಠಾಣಾಧಿಕಾರಿಯ ಹೆಸರು ಕೆಡಿಸುವುದು ಆತನ ಉದ್ದೇಶವಾಗಿತ್ತು' ಎಂದು ಹೇಮರಾಜ್ ಅವರು ಇಡೀ ಪ್ರಕರಣವನ್ನು ಬಿಚ್ಚಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.