ADVERTISEMENT

ಉತ್ತರ ಪ್ರದೇಶ: ಕೊರೊನಾ ಸೋಂಕು ನಿವಾರಣೆಗೆ ಮೂಢನಂಬಿಕೆಗೆ ಜನರ ಮೊರೆ!

ಸಂಜಯ ಪಾಂಡೆ
Published 16 ಮೇ 2021, 13:59 IST
Last Updated 16 ಮೇ 2021, 13:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಕೋವಿಡ್-19 ಸಾಂಕ್ರಾಮಿಕ ಪಿಡುಗು ಉತ್ತರ ಪ್ರದೇಶದ ಗ್ರಾಮ ಗ್ರಾಮಗಳಿಗೂ ತೀವ್ರವಾಗಿ ವ್ಯಾಪಿಸಿದೆ. ಈ ನಡುವೆ ಹಳ್ಳಿಗಳಲ್ಲಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳದೇ ಅಥವಾ ಮಾಸ್ಕ್‌ಗಳನ್ನು ಧರಿಸದೇ ಕೊರೊನಾವೈರಸ್ ಹೋಗಲಾಡಿಸಲು ಮೂಢನಂಬಿಕೆ, ಪೂಜೆಗಳಿಗೆ ಮೊರೆ ಹೋಗಿರುವುದು ಸೋಂಕು ಮತ್ತಷ್ಟು ಹರಡಲು ಕಾರಣವಾಗಲಿದೆ ಎಂಬ ಆತಂಕಹುಟ್ಟಿಸಿದೆ.

ವರದಿಗಳ ಪ್ರಕಾರ ವಾರಾಣಸಿ, ಖುಷಿನಗರ ಸೇರಿದಂತೆ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಜನರು ದೇವಾಲಯಗಳಲ್ಲಿ ಭಜನೆ, ವಿಶೇಷ ಪೂಜೆ ಮತ್ತು ಹೋಮ ಆಚರಿಸುತ್ತಿದ್ದಾರೆ.

ಲಖನೌದಿಂದ 350 ಕಿ.ಮೀ. ದೂರದಲ್ಲಿರುವ ಮೌ ಜಿಲ್ಲೆಯಲ್ಲಿ ವಿಶೇಷವಾಗಿ ಮಹಿಳೆಯರು ದಿಹ್ ಬಾಬಾ (ಸ್ಥಳೀಯ ದೇವತೆ) ಮತ್ತು ಕಾಳಿ ದೇವಾಲಯಗಳಲ್ಲಿ ಧಾರ್ (ನೀರು, ಹೂವು ಹಾಗೂ ಇತರೆ ವಸ್ತುಗಳಿಂದ ತಯಾರಿಸಿದ ಮಿಶ್ರಣ) ಅರ್ಪಿಸುತ್ತಿದ್ದಾರೆ.

ADVERTISEMENT

ಬಾಬಾ ವೈರಸ್ ಹರಡುವುದನ್ನು ನಿಯಂತ್ರಿಸಲಿದ್ದು, ತಮ್ಮ ಹಳ್ಳಿಗಳಿಗೆ ಪ್ರವೇಶಿಸಲು ಬಿಡುವುದಿಲ್ಲ ಎಂದವರು ಭಾವಿಸುತ್ತಾರೆ ಎಂದು ಮೌ ಪ್ರದೇಶದ ಸ್ಥಳೀಯ ಲೇಖಕ ಬ್ರಹ್ಮಾನಂದ್ ಪಾಂಡೆ ತಿಳಿಸಿದ್ದಾರೆ.

ವಾರಾಣಸಿಯ ಗಂಗಾ ಕಣಿವೆಯಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಸಮೀಪದ ಹಲವಾರು ಮಹಿಳೆಯರು ಭಾಗವಹಿಸುತ್ತಿದ್ದಾರೆ ಎಂದು ಮಗದೊಂದು ವರದಿ ಉಲ್ಲೇಖಿಸಿವೆ.

ಲಖನೌದಿಂದ 325 ಕಿ.ಮೀ. ದೂರದಲ್ಲಿರುವ ಖುಷಿನಗರ ಜಿಲ್ಲೆಯ ಡುಮ್ರಿ ಮಲವ್ ಗ್ರಾಮದ ದೇವಾಲಯವೊಂದರಲ್ಲಿ ಮಹಿಳೆಯರು ವಿಶೇಷ ಆಚರಣೆಗಳನ್ನು ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದರಲ್ಲಿ ಭಾಗವಹಿಸುತ್ತಿರುವವರು ಯಾರೂ ಕೂಡಾ ಮಾಸ್ಕ್ ಧರಿಸುವುದು ಕಂಡುಬರಲಿಲ್ಲ. ದೈಹಿಕ ಅಂತರವನ್ನು ಕಾಯ್ದುಕೊಳ್ಳದಿರುವುದು ಗ್ರಾಮೀಣ ಪ್ರದೇಶದಲ್ಲಿ ಸೋಂಕು ಮತ್ತಷ್ಟು ಹರಡುವ ಭೀತಿ ಹೆಚ್ಚಾಗಿದೆ.

ಖುಷಿನಗರದಲ್ಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪೂಜೆಗಳ ಬಗ್ಗೆ ಮಾಹಿತಿ ಪಡೆದಿದ್ದು, ಕೋವಿಡ್-19ಗೆ ಸಂಬಂಧಿಸಿದಂತೆ ಜನರನ್ನು ತಪ್ಪು ದಾರಿಗೆಳೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶದಲ್ಲಿ ಶೀತ, ಕೆಮ್ಮು ಹಾಗೂ ಉಸಿರಾಟದಂತಹ ಕೋವಿಡ್ ಲಕ್ಷಣಗಳನ್ನು ಹೊಂದಿರುವ ನೂರಾರು ಮಂದಿ ಮೃತಪಟ್ಟಿದ್ದಾರೆ. ಆದರೂ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ಪ್ರಸಿದ್ಧ ಗಂಗಾ, ಯಮುನಾ ಸೇರಿದಂತೆ ಇತರೆ ನದಿಗಳಲ್ಲಿ ಜನರು ಮೃತದೇಹಗಳನ್ನು ಎಸೆಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.