ನವದೆಹಲಿ: ಉತ್ತರ ಪ್ರದೇಶದ 9, ಬಿಹಾರದ 4, ರಾಜಸ್ಥಾನದ 7 ಹಾಗೂ ಪಶ್ಚಿಮ ಬಂಗಾಳದ 6 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದೆ. ಬಿಹಾರದಲ್ಲಿ ಎನ್‌ಡಿಎ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕ್ಲೀನ್ ಸ್ವೀಪ್ ಮಾಡಿದೆ.
ಲಖನೌ: ಉತ್ತರ ಪ್ರದೇಶದ 9 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಆರ್‌ಎಲ್‌ಡಿ ಏಳು ಸ್ಥಾನಗಳಲ್ಲಿ ಗೆದ್ದಿವೆ.
ಒಂಬತ್ತು ಸ್ಥಾನಗಳ ಪೈಕಿ ಕುಂದರ್ಕಿ, ಖೈರ್, ಗಾಜಿಯಾಬಾದ್, ಫುಲ್ಪುರ್, ಕಟೆಹಾರಿ ಮತ್ತು ಮಜವಾನ್ ಕ್ಷೇತ್ರಗಳನ್ನು ಬಿಜೆಪಿ ಗೆದ್ದರೆ, ಮೀರಾಪುರದಲ್ಲಿ ಮಿತ್ರಪಕ್ಷ ಆರ್‌ಎಲ್‌ಡಿ ಜಯ ಸಾಧಿಸಿದೆ.
ಇನ್ನು, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕರ್ಹಾಲ್ ಮತ್ತು ಸಿಸಮೌ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಕೋಲ್ಕತ್ತ: ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಭಾರಿ ಸದ್ದು ಮಾಡಿದ್ದು, ಉಪಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿಗೆ ಹಿನ್ನಡೆ ಆಗುವ ಸಾಧ್ಯತೆಯಿದೆ ಎಂದೇ ಭಾವಿಸಲಾಗಿತ್ತು. ಆದರೆ ಫಲಿತಾಂಶ ಬೇರೆಯದೇ ಆಗಿದೆ.
ಪಶ್ಚಿಮ ಬಂಗಾಳದ 6 ವಿಧಾನಸಭಾ ಚುನಾವಣೆಗೆ ನಡೆದ ಉಪಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿ ಆರಕ್ಕೆ ಆರೂ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ನೈಹತಿ, ಹರೋವಾ, ಮೇದಿನಿಪುರ, ತಲ್ದಂಗ್ರಾ, ಸೀತಾಯ್ (ಎಸ್‌ಸಿ ಮೀಸಲು), ಮತ್ತು ಮದರಿಹತ್ (ಎಸ್‌ಟಿ ಮೀಸಲು) ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪಚುನಾವಣೆ ನಡೆದಿತ್ತು.
2021ರ ವಿಧಾನಸಭಾ ಚುನಾವಣೆಯಲ್ಲಿ ಮದರಿಹತ್ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು, ಈ ಉಪಚುನಾವಣೆಯಲ್ಲಿ ಆ ಕ್ಷೇತ್ರವನ್ನು ಟಿಎಂಸಿ ತನ್ನ ವಶ ಮಾಡಿಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಟಿಎಂಸಿ ತನ್ನ ಪ್ರಾಬಲ್ಯವನ್ನು ಬಲಪಡಿಸಿಕೊಂಡಿದೆ.
ಈ ಗೆಲುವಿನೊಂದಿಗೆ, 294 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಟಿಎಂಸಿ ಸಂಖ್ಯೆ 216ಕ್ಕೆ ಏರಿಕೆಯಾಗಿದೆ. 2021ರಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ಸಂಖ್ಯೆ ಇದೀಗ 69ಕ್ಕೆ ಇಳಿಕೆಯಾಗಿದೆ.
ಪಟ್ನಾ: ಬಿಹಾರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲವು ಸಾಧಿಸಿದೆ. ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆರ್‌ಜೆಡಿ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಆಘಾತ ನೀಡಿದೆ.
ಇಮಾಮ್‌ಗಂಜ್, ತರಾರಿ, ರಾಮಗಢ ಮತ್ತು ಬೆಳಗಂಜ್ ಈ ನಾಲ್ಕು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ಆರ್‌ಜೆಡಿ ಭದ್ರಕೋಟೆ ಬೆಳಗಂಜ್ ಕ್ಷೇತ್ರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅಭ್ಯರ್ಥಿ ಗೆಲವು ಸಾಧಿಸಿದ್ದು, ಭಾರಿ ಮುಖಭಂಗ ಅನುಭವಿಸಿದೆ. 1990ರಿಂದಲೂ ಈ ಕ್ಷೇತ್ರದಲ್ಲಿ ಆರ್‌ಜೆಡಿ ಪ್ರಾಬಲ್ಯ ಸಾಧಿಸಿತ್ತು.
ಜೈಪುರ: ರಾಜಸ್ಥಾನದ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಐದರಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ತಲಾ ಒಂದೊಂದು ಕ್ಷೇತ್ರವನ್ನು ಕಾಂಗ್ರೆಸ್ ಮತ್ತು ಭಾರತ್ ಆದಿವಾಸಿ ಪಕ್ಷ ಗೆದ್ದುಕೊಂಡಿವೆ.
ಜುಂಜುನು, ಖಿನ್ವ್ಸರ್, ಡಿಯೋಲಿ-ಉನಿಯಾರಾ, ರಾಮಗಢ್ ಮತ್ತು ಸಾಲುಂಬರ್ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ದೌಸಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ, ಚೋರಸಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತ್ ಆದಿವಾಸಿ ಪಕ್ಷ ಜಯಗಳಿಸಿದೆ.
ಶಿಲ್ಲಾಂಗ್: ಮೇಘಾಲಯದ ಗ್ಯಾಂಬೆಗ್ರೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎನ್‌ಪಿಪಿ ಪಕ್ಷ ಜಯ ಸಾಧಿಸಿದೆ.
ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಪತ್ನಿ ಮೆಹ್ತಾಬ್ ಚಂದೀ ಸಂಗ್ಮಾ ಅವರು ಕಾಂಗ್ರೆಸ್‌ನ ಜಿಂಗ್‌ಜಾಂಗ್ ಎಂ ಮರಕ್ ಅವರನ್ನು 12,678 ಮತಗಳಿಂದ ಸೋಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.