ಡೆಹ್ರಾಡೂನ್: ಉತ್ತರಾಖಂಡದ ಗಢವಾಲ್‌ನಲ್ಲಿಯ ಪ್ರಸಿದ್ಧ ಬದ್ರಿನಾಥ ದೇವಾಲಯವನ್ನು ಭಾನುವಾರ ಭಕ್ತರಿಗಾಗಿ ತೆರೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಳಿಗಾಲದ ಆರು ತಿಂಗಳು ಈ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ಚಾರ್‌ಧಾಮ ಯಾತ್ರೆಯು (ಬದರಿನಾಥ, ಕೇದಾರನಾಥ, ಯಮನೋತ್ರಿ ಮತ್ತು ಗಂಗೋತ್ರಿ) ಆರಂಭವಾದ ಹಿನ್ನೆಲೆಯಲ್ಲಿ ಈ ದೇವಾಲಯದ ಬಾಗಿಲು ತೆರೆಯಲಾಯಿತು.
ದೇವಸ್ಥಾನದ ಆವರಣದಲ್ಲಿ ಭಾರಿ ಸಿದ್ಧತೆ ಮಾಡಲಾಗಿತ್ತು. 15 ಕ್ವಿಂಟಲ್ ಹೂವಿನಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಭಕ್ತರು ಭಾರಿ ಸಂಖ್ಯೆಯಲ್ಲಿ ದೇವಸ್ಥಾನದ ಆವರಣದಲ್ಲಿ ನೆರೆದಿದ್ದರು. ಬೆಳಿಗ್ಗೆ 6 ಗಂಟೆಗೆ ಮಂತ್ರ ಘೋಷಗಳು ಮತ್ತು ಡೋಲು, ನಗಾರಿಗಳ ಸದ್ದಿನ ಜೊತೆಗೆ ದೇವಸ್ಥಾನದ ಬಾಗಿಲು ತೆರೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನೆರೆದಿದ್ದ ಭಕ್ತರಿಗೆ ಶುಭ ಕೋರಿದರು. ದೇವಾಲಯದ ಮುಖ್ಯ ಅರ್ಚಕ ಈಶ್ವರ್ ಪ್ರಸಾದ್ ನಂಬೂದಿರಿ, ಬದ್ರಿನಾಥ– ಕೇದಾರನಾಥ ದೇವಸ್ಥಾನ ಸಮಿತಿಯ ಮುಖ್ಯಸ್ಥ ಅಜೇಂದ್ರ ಅಜಯ್ ಮತ್ತು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಕುರಾನ ಮತ್ತಿತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.
ಶನಿವಾರ ಸಂಜೆ 4 ಗಂಟೆವರೆಗೆ 7,37,885 ಜನರು ಬದ್ರಿನಾಥ ದರ್ಶನಕ್ಕಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.