ಡೆಹ್ರಾಡೂನ್: 'ಹರಿದ ಜೀನ್ಸ್' ಕುರಿತ ತಮ್ಮ ಹೇಳಿಕೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ಕೊನೆಗೂ ಕ್ಷಮೆ ಯಾಚಿಸಿದ್ದಾರೆ. 'ನನ್ನ ಹೇಳಿಕೆ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ,' ಎಂದು ಹೇಳಿದ್ದಾರೆ.
ಆದರೆ, ಕ್ಷಮೆ ಕೇಳುತ್ತಲೇ ಅವರೂ ತಮ್ಮ ಅಭಿಪ್ರಾಯವನ್ನು ಸರ್ಮಥಿಸುವಂಥ ಮಾತನ್ನೂ ಆಡಿದ್ದಾರೆ. ಜೀನ್ಸ್ ಬಗ್ಗೆ ನನಗೆ ಯಾವುದೇ ತಕರಾರುಗಳಿಲ್ಲ. ಆದರೆ 'ಹರಿದ ಬಟ್ಟೆ'ಗಳನ್ನು ಧರಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಕೆಲವು ದಿನಗಳ ಹಿಂದಷ್ಟೇ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ರಾವತ್, ಡೆಹ್ರಾಡೂನ್‌ನಲ್ಲಿ ಮಂಗಳವಾರ ಸಮಾರಂಭದರಲ್ಲಿ ಮಾತನಾಡುತ್ತಾ, ‘ಹರಿದ ಜೀನ್ಸ್ ಬಟ್ಟೆ ಧರಿಸುವುದು ಮಹಿಳೆಯರಲ್ಲಿ ಜನಪ್ರಿಯವಾಗಿದೆ. ಇದು ನಮ್ಮ ಸಂಸ್ಕೃತಿಯೇ?. ಮಕ್ಕಳು ತಮ್ಮ ಪೋಷಕರಿಂದ ಸಂಸ್ಕೃತಿ ಕಲಿಯಬೇಕು. ಆದರೆ, ಪೋಷಕರು ಹರಿದ ಜೀನ್ಸ್ ಧರಿಸಿದರೆ ಅವರಿಂದ ಯಾವ ರೀತಿಯ ಸಂಸ್ಕೃತಿಯನ್ನು ಮಕ್ಕಳು ಕಲಿಯುತ್ತಾರೆ’ ಎಂದು ಅವರು ಪ್ರಶ್ನಿಸಿದ್ದರು.
‘ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯು ತಮ್ಮನ್ನು ಸಮಾಜ ಸೇವಕಿ ಎಂದು ಪರಿಚಯಿಸಿಕೊಂಡಿದ್ದರು. ಆದರೆ ಅವರು ಹರಿದ ಜೀನ್ಸ್ ತೊಟ್ಟಿದ್ದರು. ಅದನ್ನು ಗಮನಿಸಿದಾಗ, ಯಾವ ರೀತಿಯ ಸಮಾಜ ಸೇವೆಯನ್ನು ಅವರು ಮಾಡುತ್ತಾರೆ ಎಂದು ಆಶ್ಚರ್ಯವಾಯಿತು’ ಎಂದು ಹೇಳಿದ್ದರು.
‘ಹೊಸ ತಲೆಮಾರಿನ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಹರಿದಿರುವ ಜೀನ್ಸ್ ಧರಿಸುವುದು ಪ್ರತಿಷ್ಠೆಯ ಸಂಕೇತವಾಗಿದೆ’ ಎಂದು ಅವರು ಟೀಕಿಸಿದ್ದರು.
ತೀರಥ್ ಸಿಂಗ್ ರಾವತ್ ಅವರ ಈ ಅಭಿಪ್ರಾಯದ ಬಗ್ಗೆ ಪ್ರಬಲ ಆಕ್ಷೇಪ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.