ಉತ್ತರಕಾಶಿ: ಚಳಿಗಾಲದ ಪ್ರಯುಕ್ತ ಗಂಗೋತ್ರಿ ಹಾಗೂ ಯಮುನೋತ್ರಿ ದೇವಾಲಯಗಳನ್ನು ನವೆಂಬರ್ 2 ಮತ್ತು 3 ರಂದು ಮುಚ್ಚಲಾಗುವುದು ಎಂದು ದೇವಸ್ಥಾನ ಮೂಲಗಳು ಹೇಳಿವೆ.
ಹಿಮಾವೃತವಾಗುವುದರಿಂದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ನೆಲೆಗೊಂಡಿರುವ ಚಾರ್‌ಧಾಮ್ ಎಂದೇ ಪ್ರಸಿದ್ದವಾಗಿರುವ ಈ ದೇಗುಲಗಳನ್ನು ಚಳಿಗಾಲದಲ್ಲಿ ಮುಚ್ಚಲಾಗುತ್ತದೆ.
ನವೆಂಬರ್ 2ರಂದು ಮಧ್ಯಾಹ್ನ 12.14ಕ್ಕೆ ಗಂಗೋತ್ರಿ ದೇವಸ್ಥಾನದ ದ್ವಾರಗಳನ್ನು ಮುಚ್ಚಲಾಗುವುದು ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಸುರೇಶ್ ಸೇಮ್ವಾಲ್ ತಿಳಿಸಿದ್ದಾರೆ.
ನವೆಂಬರ್ 3ರಂದು ಯಮುನೋತ್ರಿ ದೇಗುಲದ ದ್ವಾರಗಳನ್ನು ಮುಚ್ಚಲಾಗುವುದು ಎಂದು ದೇವಸ್ಥಾನದ ಅರ್ಚಕ ರಾವಲ್ ಆಶಿಶ್ ಉನಿಯಾಲ್ ಹೇಳಿದ್ದಾರೆ.
ಸಂಪ್ರದಾಯದ ಪ್ರಕಾರ ದಸರಾ ದಿನದಂದು ದೇಗುಲಗಳನ್ನು ಮುಚ್ಚಲು ಶುಭ ಮುಹೂರ್ತವನ್ನು ನಿರ್ಧರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಗಂಗೋತ್ರಿ ದೇವಸ್ಥಾನದ ಬಾಗಿಲು ಮುಚ್ಚಿದ ನಂತರ, ಗಂಗಾ ಮಾತೆಯ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಮುಖ್ಬಾ ಗ್ರಾಮದ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಚಳಿಗಾಲದಲ್ಲಿ ಇಲ್ಲಿ ಪೂಜಿಸಲಾಗುತ್ತದೆ. ಅಂತೆಯೇ, ಯಮುನೋತ್ರಿ ದೇವಸ್ಥಾನವನ್ನು ಮುಚ್ಚಿದ ನಂತರ, ಯಮುನಾ ದೇವಿಯ ವಿಗ್ರಹವನ್ನು ಖರ್ಸಾಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.