ADVERTISEMENT

ಉತ್ತರಾಖಂಡ ಹಿಮನದಿ ನೀರ್ಗಲ್ಲು ಕುಸಿತ ಪ್ರಕರಣ| ರಕ್ಷಣಾ ಕಾರ್ಯಾಚರಣೆಗೆ ಅಡಚಣೆ

ಉತ್ತರಾಖಂಡ ಹಿಮನದಿ ನೀರ್ಗಲ್ಲು ಕುಸಿತ ಪ್ರಕರಣ

ಏಜೆನ್ಸೀಸ್
Published 10 ಫೆಬ್ರುವರಿ 2021, 15:42 IST
Last Updated 10 ಫೆಬ್ರುವರಿ 2021, 15:42 IST
ತಪೋವನ ಸುರಂಗದಲ್ಲಿ ಇರುವ ವಿದ್ಯುತ್ ತಂತಿ ಮತ್ತು ಕಬ್ಬಿಣದ ಬೀಮ್‌ಗಳನ್ನು ಕತ್ತರಿಸಿ, ಮಣ್ಣು ತೆರವು ಮಾಡುವ ಕಾರ್ಯಾಚರಣೆ ನಡೆಸಲಾಯಿತು    -ಪಿಟಿಐ ಚಿತ್ರ
ತಪೋವನ ಸುರಂಗದಲ್ಲಿ ಇರುವ ವಿದ್ಯುತ್ ತಂತಿ ಮತ್ತು ಕಬ್ಬಿಣದ ಬೀಮ್‌ಗಳನ್ನು ಕತ್ತರಿಸಿ, ಮಣ್ಣು ತೆರವು ಮಾಡುವ ಕಾರ್ಯಾಚರಣೆ ನಡೆಸಲಾಯಿತು    -ಪಿಟಿಐ ಚಿತ್ರ   

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ನೀರ್ಗಲ್ಲು ಕುಸಿತದ ಪರಿಣಾಮ ಉಂಟಾಗಿದ್ದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 32ಕ್ಕೆ ತಲುಪಿದೆ. ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಆದರೆ, ರಕ್ಷಣಾ ಕಾರ್ಯದಲ್ಲಿ ಗಣನೀಯ ಪ್ರಗತಿ ಸಾಧ್ಯವಾಗಿಲ್ಲ ಎಂದು ಚಮೋಲಿ ಜಿಲ್ಲಾಡಳಿತವು ಹೇಳಿದೆ.

ತಪೋವನ ಮತ್ತು ರೈನಿ ಪ್ರದೇಶದಲ್ಲಿ ನಾಪತ್ತೆಯಾದವರ ಸಂಖ್ಯೆಯ ಬಗ್ಗೆ ಗೊಂದಲಗಳಿವೆ. ಮೃತ 32 ಜನರಲ್ಲಿ 8 ಜನರ ಗುರುತನ್ನಷ್ಟೇ ಪತ್ತೆ ಮಾಡಲು ಸಾಧ್ಯವಾಗಿದೆ. ಒಂದು ಅಂದಾಜಿನ ಪ್ರಕಾರ 202 ಜನರು ನಾಪತ್ತೆಯಾಗಿದ್ದಾರೆ. ಆದರೆ ಮತ್ತೊಂದು ಅಂದಾಜಿನ ಪ್ರಕಾರ ನಾಪತ್ತೆಯಾದವರ ಸಂಖ್ಯೆ 192. ಇದು ರಕ್ಷಣಾ ಕಾರ್ಯಚರಣೆ ಮುಂದುವರಿಸುವಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಪಡೆ (ಐಟಿಬಿಪಿ) ಹೇಳಿದೆ.

ರೈನಿ ಪ್ರದೇಶದಲ್ಲಿ ಜಡಿಮಳೆಯಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರಿಸಲು ಅಡಚಣೆಯಾಗಿದೆ. ಮಳೆ ಹೆಚ್ಚಾದರೆ, ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗಬಹದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ತಪೋವನದ ಸುರಂಗದಿಂದ ಕೆಸರು ಮತ್ತು ನೀರು ಹೊರಗೆ ಬರುತ್ತಿದೆ. ಸುರಂಗದಲ್ಲಿನ ಅವಶೇಷಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಭಾರಿ ಒತ್ತಡದಲ್ಲಿ ಕೆಸರು ಮತ್ತು ನೀರು ಹೊರಬರುವ ಅಪಾಯವಿದೆ. ಹಾಗೇನಾದರೂ ಆದರೆ, ರಕ್ಷಣಾ ಸಿಬ್ಬಂದಿಯೂ ಅಪಾಯಕ್ಕೆ ಸಿಲುಕಬಹುದು. ಹೀಗಾಗಿ, ಸುರಂಗದಲ್ಲಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಐಟಿಪಿಬಿ ಅಧಿಕಾರಿಗಳು ಹೇಳಿದ್ದಾರೆ.

‘ತಪೋವನದ ಸುರಂಗವು 2.5 ಕಿ.ಮೀ. ಉದ್ದವಿದೆ. ಸುರಂಗದಲ್ಲಿ 30-35 ಕಾರ್ಮಿಕರು ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವ ಕಾರಣ, ಕಾರ್ಮಿಕರ ಸ್ಥಿತಿಯ ಬಗ್ಗೆ ಆತಂಕವಿದೆ. ಸುರಂಗ ವಿನ್ಯಾಸ ಮಾಡಿದ್ದ ತಜ್ಞರು, ರಕ್ಷಣಾ ಕಾರ್ಯದಲ್ಲಿ ಸಿಬ್ಬಂದಿಗೆ ನೆರವಾಗುತ್ತಿದ್ದಾರೆ. ಸೇನೆ ಮತ್ತು ನೌಕಾಪಡೆಯ ಮುಳುಗುಗಾರರೂ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುರಂಗದ ಆರಂಭದಿಂದ 180 ಮೀಟರ್‌ನಷ್ಟು ಒಳಭಾಗದಲ್ಲಿ ಕಾರ್ಮಿಕರು ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. ರಕ್ಷಣಾ ಸಿಬ್ಬಂದಿಯು ಈವರೆಗೆ 120 ಮೀಟರ್‌ನಷ್ಟು ಪ್ರದೇಶವನ್ನು ತೆರವು ಮಾಡಿದ್ದಾರೆ. ಬುಧವಾರ ರಾತ್ರಿ ಕಾರ್ಮಿಕರು ಇದ್ದ ಸ್ಥಳವನ್ನು ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಜ್ಞರ ವಿವರಣೆ

ನೀರ್ಗಲ್ಲಿನ ಒಂದು ಭಾಗವು ನೆಲದ ಆಧಾರವಿಲ್ಲದೆ ನಿಂತಿತ್ತು. ಅದು ತನ್ನದೇ ಭಾರಕ್ಕೆ ಮುರಿದುಬಿದ್ದು ದಿಢೀರ್ ಪ್ರವಾಹ ಸಂಭವಿಸಿರುವ ಸಾಧ್ಯತೆ ಇದೆ ಎಂದು ಈ ದುರಂತದ ಅಧ್ಯಯನಕ್ಕೆ ತೆರಳಿದ್ದ ತಜ್ಞರ ತಂಡವು ಹೇಳಿದೆ.

ನೀರ್ಗಲ್ಲಿನ ಅಡಿಯಲ್ಲಿದ್ದ ಮಣ್ಣು ಮತ್ತು ಕಲ್ಲು ಕೊರೆತದಿಂದ ಸಡಿಲವಾಗಿದೆ. ಕಾಲಾನಂತರ ಆ ಜಾಗ ಟೊಳ್ಳಾಗಿದೆ. ಟೊಳ್ಳಾದ ಜಾಗದಲ್ಲಿ ಭಾರಿ ಪ್ರಮಾಣದ ನೀರು ಶೇಖರವಾಗಿದೆ. ಈ ನೀರನ್ನು ಅಣೆಕಟ್ಟೆಯಂತೆ ತಡೆದು ನಿಲ್ಲಿಸಿದ್ದ ನೀರ್ಗಲ್ಲು ಮುರಿದಿದೆ. ಆಗ ಜಲಾಶಯದಿಂದ ನೀರು ಹೊರಬಂದಂತೆ ದಿಢೀರ್ ಎಂದು ನೀರು ಬಂದು, ಪ್ರವಾಹ ಉಂಟಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.

ಪ್ರವಾಹದಿಂದ ನಾಶವಾಗಿರುವ ರೈನಿ ಮತ್ತು ತಪೋವನ ಪ್ರದೇಶಗಳ ಉಪಗ್ರಹಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿದೆ.

ದಿನದ ಬೆಳವಣಿಗೆ

* ಸುರಂಗದಲ್ಲಿ ಡ್ರೋನ್‌ ಕ್ಯಾಮೆರಾ ಹಾರಿಸಿ, ಕಾರ್ಮಿಕರನ್ನು ಪತ್ತೆ ಮಾಡಲು ಯತ್ನ. ಯತ್ನ ವಿಫಲ

* ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾದ ಸ್ಥಳಕ್ಕೆ ವೆಂಟಿಲೇಷನ್‌ ವ್ಯವಸ್ಥೆ ಇದೆ. ಹೀಗಾಗಿ ಕಾರ್ಮಿಕರು ಉಸಿರುಗಟ್ಟುವ ಅಪಾಯ ಇಲ್ಲ ಎಂದು ಅಂದಾಜಿಸಲಾಗಿದೆ

* ಕಾರ್ಮಿಕರು ಸಿಲುಕಿರುವ ಪ್ರದೇಶದಲ್ಲಿ 23-25 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇದೆ. ಹೀಗಾಗಿ ಕಾರ್ಮಿಕರಿಗೆ ಚಳಿಯ ಸಮಸ್ಯೆ ಆಗದು ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ

* ರೈನಿ ಬಳಿ ಸೇತುವೆ ಧ್ವಂಸವಾಗಿರುವ ಕಾರಣ 13 ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಈ ಹಳ್ಳಿಗಳಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ

* ಈ ಹಳ್ಳಿಗಳ ಜನರಿಗೆ ದಿನನಿತ್ಯದ ವಸ್ತುಗಳನ್ನು ತಲುಪಿಸಲು ಹೆಲಿಕಾಪ್ಟರ್ ಬಳಸಲಾಗಿದೆ

* ಐಟಿಬಿಪಿ ಸಿಬ್ಬಂದಿ ಸಹ ನೀರ್ಗಲ್ಲು ಕುಸಿದ ಪ್ರದೇಶಕ್ಕೆ ತೆರಳಿ, ಚಿತ್ರ ಮತ್ತು ವಿಡಿಯೊಗಳನ್ನು ಚಿತ್ರೀಕರಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.