ADVERTISEMENT

ಉತ್ತರಾಖಂಡ ನೀರ್ಗಲ್ಲು ದುರಂತ| ರಕ್ಷಣಾ ಕಾರ್ಯಾಚರಣೆ ಸ್ಥಗಿತ

ತಪೋವನ ಸುರಂಗದೊಳಕ್ಕೆ ಭಾರಿ ಕೆಸರು ಹಾಗೂ ನೀರು

ಪಿಟಿಐ
Published 11 ಫೆಬ್ರುವರಿ 2021, 16:48 IST
Last Updated 11 ಫೆಬ್ರುವರಿ 2021, 16:48 IST
ತಪೋವನ ಸುರಂಗ ಸ್ಥಳಕ್ಕೆ ಉತ್ತರಾಖಂಡ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಗುರುವಾರ ಭೇಟಿ ನೀಡಿದರು
ತಪೋವನ ಸುರಂಗ ಸ್ಥಳಕ್ಕೆ ಉತ್ತರಾಖಂಡ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಗುರುವಾರ ಭೇಟಿ ನೀಡಿದರು   

ತಪೋವನ (ಉತ್ತರಾಖಂಡ): ಧೌಲಿ ಗಂಗಾ ನದಿಯಲ್ಲಿ ಗುರುವಾರ ನೀರಿನ ಮಟ್ಟ ಹೆಚ್ಚಳವಾಗಿದ್ದರಿಂದ ತಪೋವನ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸುರಂಗದೊಳಗೆ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆ ಸಿಬ್ಬಂದಿ ಹೊರ ಬಂದಿದ್ದಾರೆ. ಕೆಸರು ಹಾಗೂ ಅವಶೇಷ ತೆಗೆಯುತ್ತಿದ್ದ ಭಾರಿ ಯಂತ್ರಗಳನ್ನು ಕೂಡ ಹೊರ ತೆಗೆಯಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಚಮೋಲಿ ಜಿಲ್ಲಾಮ್ಯಾಜಿಸ್ಟ್ರೇಟ್‌ ಸ್ವಾತಿ ಎಸ್‌. ಭಡಾರಿಯಾ ತಿಳಿಸಿದ್ದಾರೆ.

ADVERTISEMENT

ಡ್ರಿಲ್ಲಿಂಗ್‌ ಕಾರ್ಯಾಚರಣೆ

ತಪೋವನ ಸುರಂಗದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಡ್ರಿಲ್ಲಿಂಗ್‌ ಕಾರ್ಯಾಚರಣೆಯನ್ನು ಗುರುವಾರ ಆರಂಭಿಸಲಾಗಿತ್ತು. ಸುರಂಗದೊಳಗೆ 30–35 ಜನರು ಸಿಲುಕಿದ್ದಾರೆಂದು ನಂಬಲಾಗಿದೆ.

ಪ್ರವಾಹದಿಂದಾಗಿ ಇಲ್ಲಿಯವರೆಗೂ 34 ಜನರು ಸಾವನ್ನಪ್ಪಿದ್ದಾರೆ. 170ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ.

‘ತಪೋವನದ ಸುರಂಗದಲ್ಲಿ ಕಳೆದ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. 2.5 ಕಿ.ಮೀ ಉದ್ದದ ಕೊಳವೆಯಾಕಾರದ ಜಲಶಕ್ತಿ ಸುರಂಗದಲ್ಲಿ ಈಗಾಗಲೇ 1.5 ಕಿ.ಮೀ ಗಿಂತಲೂ ಹೆಚ್ಚು ದೂರ ಕಾರ್ಯಾಚರಣೆ ಸಾಗಿದೆ. ಈಕೆಸರು ತುಂಬಿಕೊಂಡಿರುವ ಸುರಂಗದೊಳಗೆ ರಕ್ಷಣಾ ಕಾರ್ಯಾಚರಣೆ ಪಡೆಯು ಮಧ್ಯರಾತ್ರಿ ಎರಡು ಗಂಟೆಯಿಂದಲೇ 12–13 ಮೀಟರ್‌ ಡ್ರಿಲ್ಲಿಂಗ್‌ ಕಾರ್ಯಾಚರಣೆ ಆರಂಭಿಸಿದ್ದಾರೆ‘ ಎಂದು ರಕ್ಷಣಾ ಕೆಲಸದಲ್ಲಿ ತೊಡಗಿರುವ ಇಂಡೋ– ಟಿಬೆಟಿಯನ್‌ ಗಡಿ ಪೊಲೀಸ್‌, ರಕ್ಷಣಾ ಕಾರ್ಯಾಚರಣೆಯ ವಕ್ತಾರ ವಿವೇಕ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಬುಧವಾರದ ತನಕ ಸುರಂಗದ ಆರಂಭದಿಂದ 120 ಮೀಟರ್‌ ವರೆಗೆ ಕೆಸರು ತೆಗೆಯಲಾಗಿದೆ. ಸುರಂಗದೊಳಗೆ ಸಿಲುಕಿರುವವರು 180 ಮೀಟರ್‌ ದೂರದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಸುರಂಗ
ದೊಳಗಿಂದ ಭಾರಿ ಕೆಸರು ಹಾಗೂ ನೀರು ಬರುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಪಾಂಡೆ ಹೇಳಿದ್ದಾರೆ.

ಇಂಡೋ– ಟಿಬೆಟಿಯನ್‌ ಗಡಿ ಪೊಲೀಸ್‌ ಮುಖ್ಯಸ್ಥ ಎಸ್‌.ಎಸ್‌. ದೇಸ್ವಾಲ್‌ ಅವರು , ’ತಾರ್ಕಿಕ ಅಂತ್ಯ ಸಿಗುವವರೆಗೆ ಅಥವಾ ಸುರಂಗದೊಳಗೆ ಸಿಲುಕಿರುವವರು ಸಿಗುವವರೆಗೆ ಎಷ್ಟೇ ದೂರ ಇದ್ದರೂ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು. ಕಳೆದ ಐದು ದಿನಗಳಿಂದ ಆಹಾರ, ನೀರು ಇಲ್ಲದೇ ಸುರಂಗದೊಳಗೆ ಸಿಲುಕಿರುವವರ ಸ್ಥಿತಿ ಚಿಂತಾಜನಕವಾಗಿರಬಹುದು. ಆದರೆ ಸುರಂಗದೊಳಗೆ ತಾಪಮಾನ 20–25 ಡಿಗ್ರಿ ಸೆಲ್ಸಿಯಸ್‌ ಇರುವುದು, ಆಮ್ಲಜನಕದ ಲಭ್ಯತೆಯು ಅವರು ಬದುಕುಳಿದಿರುವ ಸಾಧ್ಯತೆಯ ಭರವಸೆಯನ್ನು ಮೂಡಿಸಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.