ADVERTISEMENT

ಉತ್ತರಾಖಂಡದಲ್ಲಿ ಹಿಮಪಾತ: ಪ್ರವಾಹದಲ್ಲಿ 18 ಶವಗಳು ಪತ್ತೆ, 202 ಜನರು ನಾಪತ್ತೆ

ಪಿಟಿಐ
Published 8 ಫೆಬ್ರುವರಿ 2021, 13:29 IST
Last Updated 8 ಫೆಬ್ರುವರಿ 2021, 13:29 IST
   

ಡೆಹರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತದಿಂದಾಗಿ ಪ್ರವಾಹ ಉಂಟಾದ ನಂತರ ಈವರೆಗೆ ಹದಿನೆಂಟು ಜನರ ಶವಗಳು ಪತ್ತೆಯಾಗಿದ್ದು, ಇನ್ನೂ 202 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಸ್ಥಾವರದ ಬಳಿಯ ಸುರಂಗದಲ್ಲಿ ಸಿಲುಕಿರುವ ಕನಿಷ್ಠ 30 ಕಾರ್ಮಿಕರನ್ನು ರಕ್ಷಿಸಲು ಅನೇಕ ಏಜೆನ್ಸಿಗಳು ಕೈಜೋಡಿಸಿವೆ.

ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಮತ್ತು ಇದು ಇನ್ನಷ್ಟು ಏರಿಕೆಯಾಗಬಹುದೆಂದು ಇಲ್ಲಿನ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ನಂದಾ ದೇವಿ ಹಿಮನದಿಯ ಒಂದು ಭಾಗದಲ್ಲಿ ಉಂಟಾದ ಹಿಮಪಾತದಿಂದಾಗಿ ಜೋಶಿಮಠದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಘಟನೆಯಲ್ಲಿ 125 ಮಂದಿ ಕಣ್ಮರೆಯಾಗಿದ್ದರು. ಇದೀಗ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಸದ್ಯ ಕಾಣೆಯಾಗಿದ್ದವರಲ್ಲಿ ಇನ್ನೂ 202 ಜನರು ಪತ್ತೆಯಾಗಬೇಕಿದ್ದು, ಇವರಲ್ಲಿ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರು ಮತ್ತು ಪ್ರವಾಹಕ್ಕೆ ಕೊಚ್ಚಿಹೋಗಿದ್ದ ಮನೆಗಳಲ್ಲಿದ್ದ ಸ್ಥಳೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜೀವ ಉಳಿಸುವುದು ಮತ್ತು ಮೃತ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವನ್ನು ನೀಡುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ. ಕೇಂದ್ರ ಸಚಿವರಾದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಆರ್‌.ಕೆ. ಸಿಂಗ್ ಜೊತೆಗೆ ಪೌರಿ ಸಂಸದ ತಿರಥ್ ಸಿಂಗ್ ರಾವತ್, ಉತ್ತರಾಖಂಡ ಸಚಿವ ಧನ್ ಸಿಂಗ್ ರಾವತ್ ಕೂಡ ವಿಪತ್ತು ಪೀಡಿತ ತಪೋವನ ಮತ್ತು ರೈನಿಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪ್ರವಾಹದ ತೀವ್ರತೆಗೆ ಎನ್‌ಪಿಟಿಸಿಯ 480 ಮೆಗಾವ್ಯಾಟ್ ತಪೋವನ್-ವಿಷ್ಣುಗಡ ಯೋಜನೆ ಮತ್ತು 13.2ಮೆಗಾವ್ಯಾಟ್‌ನ ರಿಷಿಗಂಗಾ ಹೈಡೆಲ್ ಪ್ರಾಜೆಕ್ಟ್ ಹಾನಿಗೊಳಗಾಗಿದ್ದು, ನೀರು ನುಗ್ಗುತ್ತಿದ್ದಂತೆ ಒಳಗೆ ಸಿಕ್ಕಿಬಿದ್ದ ಹಲವಾರು ಕಾರ್ಮಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಜೋಶಿಮಠದ ಸಮೀಪ ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ತಂಡಗಳು ಪಾಲ್ಗೊಂಡಿವೆ. 30 ರಿಂದ 35 ಜನರು ತಪೋವನ-ವಿಷ್ಣುಗಡ ಯೋಜನೆಯಲ್ಲಿ ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.