ADVERTISEMENT

ಆಯುರ್ವೇದ ವೈದ್ಯರಿಗೆ ಅಲೋಪಥಿ ಔಷಧ ಸಲಹೆ ನೀಡಲು ಅವಕಾಶ: ಉತ್ತರಾಖಂಡ ಸರ್ಕಾರ

ಪಿಟಿಐ
Published 22 ಜೂನ್ 2021, 10:33 IST
Last Updated 22 ಜೂನ್ 2021, 10:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಡೆಹ್ರಾಡೂನ್: ಆಯುರ್ವೇದ ವೈದ್ಯರು ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ಆಯ್ದ ಅಲೋಪತಿ ಔಷಧಿಗಳನ್ನು ಶಿಫಾರಸು ಮಾಡಲು ಅವಕಾಶ ಕಲ್ಪಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದ್ದು, ಆಯುರ್ವೇದ-ವರ್ಸಸ್-ಅಲೋಪತಿ ಚರ್ಚೆ ಹೊಸ ತಿರುವು ಪಡೆದುಕೊಂಡಿದೆ.

ಇಲ್ಲಿನ ಉತ್ತರಾಖಂಡ ಆಯುರ್ವೇದ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭ, ಆಯುಷ್ ಸಚಿವ ಹರಕ್ ಸಿಂಗ್ ರಾವತ್ ಅವರು ರಾಜ್ಯದ ದೂರದ ಬೆಟ್ಟ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಾಗಿ ಆಯುರ್ವೇದ ವೈದ್ಯರಿದ್ದಾರೆ. ಹೀಗಾಗಿ, ಇಲ್ಲಿ ವಾಸಿಸುವ ಜನರ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಸುಮಾರು 800 ಆಯುರ್ವೇದ ವೈದ್ಯರಿದ್ದಾರೆ ಮತ್ತು ಅನೇಕ ಆಯುರ್ವೇದ ಔಷಧಾಲಯಗಳಿವೆ, ಅದರಲ್ಲಿ ಶೇ. 90 ರಷ್ಟು ದೂರದ ಬೆಟ್ಟಪ್ರದೇಶಗಳಲ್ಲಿವೆ ಎಂದು ಅವರು ಹೇಳಿದರು.

ADVERTISEMENT

ಉತ್ತರಪ್ರದೇಶದ ಭಾರತೀಯ ಚಿಕಿತ್ಸಾ ಅಧಿನಿಯಮದಡಿಯಲ್ಲಿ ಅಗತ್ಯವಿರುವ ಈ ನಿರ್ಧಾರವು ವಿಪತ್ತು ಮತ್ತು ಅಪಘಾತ ಪೀಡಿತ ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಸೂಕ್ತ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗಿರುವ ಜನರಿಗೆ ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.

ಆದರೆ, ಉತ್ತರಾಖಂಡದ ಈ ಪ್ರಕಟಣೆಯ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದಿಂದ ತೀಕ್ಷ್ಣ ಪ್ರತಿಕ್ರಿಯೆ ಬಂದಿದ್ದು, ಇದು ‘ಕಾನೂನುಬಾಹಿರ’ಎಂದು ಕರೆದಿದೆ.

‘ಇದು ಕಾನೂನುಬಾಹಿರ ಮತ್ತು ಮಿಕ್ಸೋಪತಿ ವರ್ಗಕ್ಕೆ ಸೇರುತ್ತದೆ’ ಎಂದು ಉತ್ತರಾಖಂಡ ಕಾರ್ಯದರ್ಶಿ ಅಜಯ್ ಖನ್ನಾ ಹೇಳಿದ್ದಾರೆ.

‘ಮಿಕ್ಸೋಪತಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಹಾನಿ ಮಾಡುತ್ತದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಈ ಬಗ್ಗೆ ಬಹಳ ಸ್ಪಷ್ಟವಾಗಿವೆ. ಆಯುರ್ವೇದ ವೈದ್ಯರು ಅಲೋಪತಿಯನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಅವರು ಅದಕ್ಕೆ ಅರ್ಹತೆ ಹೊಂದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಆಯುರ್ವೇದ ವೈದ್ಯರು ಅಲೋಪತಿ ಬಗ್ಗೆ ತಿಳಿಯದೆ ಅಲೋಪತಿ ಔಷಧಿಗಳನ್ನು ಹೇಗೆ ಶಿಫಾರಸು ಮಾಡಬಹುದು?’ ಎಂದು ಖನ್ನಾ ಕೇಳಿದರು.

ಆದರೆ, ಉತ್ತರಾಖಂಡದ ಭಾರತೀಯ ಚಿಕಿತ್ಸಾ ಪರಿಷತ್‌ನ ಉಪಾಧ್ಯಕ್ಷ ಮತ್ತು ಹಿರಿಯ ವೈದ್ಯ ಜೆ ಎನ್ ನೌಟಿಯಲ್ ಅವರು ಈ ನಿರ್ಧಾರವನ್ನು ಸ್ವಾಗತಿಸಿದ್ದು, ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗಿರುವ ರಾಜ್ಯದ ಜನಸಂಖ್ಯೆಯ ಶೆ. 80 ರಷ್ಟು ಜನರು ಇದರಿಂದ ಅಪಾರ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

ಐಎಂಎ ಪ್ರತಿಕ್ರಿಯೆ ಬಗ್ಗೆ ಕಿಡಿಕಾರಿರುವ ನೌತಿಯಾಲ್, ‘ಐಎಂಎ ಎರಡು ದ್ವಂದ್ವ ನಿಲುವುಗಳನ್ನು ಹೊಂದಿದೆ. ಆಯುಷ್ ವೈದ್ಯರು ಐಸಿಯುಗಳು ಮತ್ತು ಆಸ್ಪತ್ರೆಗಳ ತುರ್ತು ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಾರೆ. ಐಎಂಎಗೆ ಅದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಈಗ, ಬೆಟ್ಟಗಳಲ್ಲಿ ವಾಸಿಸುವ ಜನರಿಗೆ ಏನಾದರೂ ದೊಡ್ಡದೊಂದು ಪ್ರಯೋಜನವಾಗಲಿರುವಾಗ ಅವರಿಗೆ ಸಮಸ್ಯೆ ಇದೆ.’ಎಂದಿದ್ದಾರೆ.

ಕೋವಿಡ್-19 ಚಿಕಿತ್ಸೆಯಲ್ಲಿ ಅಲೋಪತಿ ಔಷಧಿಗಳ ಪರಿಣಾಮಕಾರಿತ್ವವನ್ನು ರಾಮ್‌ದೇವ್ ಪ್ರಶ್ನಿಸಿದಾಗ ಕಳೆದ ತಿಂಗಳು ದೇಶದಲ್ಲಿ ಆಯುರ್ವೇದ-ವರ್ಸಸ್-ಅಲೋಪತಿ ಚರ್ಚೆ ಪ್ರಾರಂಭವಾಯಿತು. ಐಎಂಎಯ ಉತ್ತರಾಖಂಡ ಘಟಕವು ಯೋಗಗುರು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ, ₹ 1,000 ಕೋಟಿ ಪರಿಹಾರ ಕೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.