ಡೆಹ್ರಾಡೂನ್: ಮನೆಗಳಲ್ಲಿ ವೈಯಕ್ತಿಕ ‘ಮಿನಿ ಹೋಮ್ ಬಾರ್’ ಹೊಂದಲು ಅವಕಾಶ ಮಾಡಿಕೊಡುವ ಅಬಕಾರಿ ನೀತಿಯ ಕೆಲವು ಭಾಗಗಳನ್ನು ಉತ್ತರಾಖಂಡ ಸರ್ಕಾರ ಹಿಂಪಡೆದಿದೆ.
ಮಿನಿ ಬಾರ್‌ಗಳಿಗೆ ಪರವಾನಗಿಗಳನ್ನು ನೀಡುವ ನೀತಿಗೆ ಸಂಬಂಧಿಸಿದ ಕೈಪಿಡಿಯಲ್ಲಿನ 11 ಮತ್ತು 13ನೇ ನಿಯಮಗಳನ್ನು ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ ಎಂದು ಅಬಕಾರಿ ಆಯುಕ್ತರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಅಬಕಾರಿ ನೀತಿ ಕೈಪಿಡಿ 2023-24 ಅನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು. ಐದು ವರ್ಷ ಸತತವಾಗಿ ಆದಾಯ ತೆರಿಗೆ ಪಾವತಿಸಿದವರು ವಾರ್ಷಿಕ ₹12,000 ಪಾವತಿಸಿ, ಮಿನಿ ಹೋಮ್ ಬಾರ್ ಪರವಾನಗಿ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು.
ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯ 9 ಲೀಟರ್, ವಿದೇಶಿ ಮದ್ಯ 18 ಲೀಟರ್, ವೈನ್ 9 ಲೀಟರ್, 15.6 ಲೀಟರ್ ಬಿಯರ್ ಅನ್ನು ತಮ್ಮ ವೈಯಕ್ತಿಕ ಬಾರ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ನೀತಿಯಲ್ಲಿ ಅವಕಾಶ ನೀಡಲಾಗಿತ್ತು. ಆದರೆ, ಮಿನಿ ಬಾರ್ ಅನ್ನು ವಾಣಿಜ್ಯ ಚಟುವಟಿಕೆಗೆ ಬಳಸದಂತೆಯೂ, ವೈಯಕ್ತಿಕ ಬಳಕೆಗೆ ಮಾತ್ರ ಮೀಸಲಿಡಬೇಕೆಂದೂ, 21 ವರ್ಷಕ್ಕಿಂತ ಕಡಿಮೆ ಪ್ರಾಯದವರು ಈ ಬಾರ್ ಪ್ರವೇಶಿಸಲು ಅವಕಾಶ ನೀಡಬಾರದೆಂದೂ ನೀತಿಯಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.