ನೈನಿತಾಲ್: ‘ಸಹಜೀವನ ನಡೆಸುತ್ತಿದ್ದ ಹಿಂದೂ–ಮುಸ್ಲಿಂ ಧರ್ಮದ ಜೋಡಿಯು ಏಕರೂಪ ನಾಗರಿಕ ಸಂಹಿತೆಯಡಿ (ಯುಸಿಸಿ) ಸಂಬಂಧ ನೋಂದಣಿಗೆ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ಉತ್ತರಾಖಂಡ ಹೈಕೋರ್ಟ್ ಆದೇಶಿಸಿದೆ.
ವಯಸ್ಕರಾಗಿದ್ದ ಜೋಡಿಯು ರಕ್ಷಣೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಲೇವಾರಿ ಮಾಡಿದ ಹೈಕೋರ್ಟ್ ಈ ಆದೇಶ ನೀಡಿತು. ರಾಜ್ಯದಲ್ಲಿ ಯುಸಿಸಿ ಇನ್ನೂ ಅನುಷ್ಠಾನವೇ ಆಗಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಆದೇಶವು ಹಲವರಲ್ಲಿ ಆಶ್ಚರ್ಯವನ್ನು ಮೂಡಿಸಿದೆ.
ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ತಿವಾರಿ ಮತ್ತು ಪಂಕಜ್ ಪುರೋಹಿತ್ ಅವರಿದ್ದ ವಿಭಾಗೀಯ ಪೀಠವು, ಜೋಡಿ ಯುಸಿಸಿ ಅನ್ವಯ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಯು 6 ವಾರ ಅವಧಿಗೆ ರಕ್ಷಣೆಯನ್ನು ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಸರ್ಕಾರದ ಪರ ಹಿರಿಯ ವಕೀಲರು, ‘ಕೋರ್ಟ್‌ನಲ್ಲಿ ಹಾಜರಿದ್ದ ಕಿರಿಯ ವಕೀಲರಿಗೆ ರಾಜ್ಯದಲ್ಲಿ ಯುಸಿಸಿ ಅನುಷ್ಠಾನ ಕುರಿತಂತೆ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಇದೊಂದು ತಪ್ಪುಗ್ರಹಿಕೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಯುಸಿಸಿಗೆ ಸಂಬಂಧಿಸಿದ ಅಂಶವನ್ನು ಕೈಬಿಟ್ಟು ಪರಿಷ್ಕೃತ ಆದೇಶವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಅರ್ಜಿಯು ಮರು ಪರಿಶೀಲನೆಗೆ ಮತ್ತೆ ಪೀಠದ ಎದುರು ಬರಲಿದೆ. ಈ ಮಧ್ಯೆ, ಅರ್ಜಿಯನ್ನು ಸಲ್ಲಿಸಿದ್ದ ಜೋಡಿಗೆ ಪೊಲೀಸರ ರಕ್ಷಣೆ ಸಿಗಲಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಸಹಜೀವನ ನಡೆಸುತ್ತಿದ್ದ 26 ವರ್ಷ ವಯಸ್ಸಿನ ಹಿಂದೂ ಮಹಿಳೆ ಮತ್ತು 21 ವರ್ಷ ವಯಸ್ಸಿನ ಮುಸ್ಲಿಂ ಯುವಕ ಅರ್ಜಿ ಸಲ್ಲಿಸಿದ್ದರು. ‘ನಾವಿಬ್ಬರೂ ವಯಸ್ಕರು. ಕುಟುಂಬದವರ ಬೆದರಿಕೆ ಇದೆ. ಪೊಲೀಸರ ರಕ್ಷಣೆ ಬೇಕಿದೆ’ ಎಂದು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.