ADVERTISEMENT

ಉತ್ತರಕಾಶಿ ಸುರಂಗ ಕುಸಿತ: ಸ್ಥಗಿತಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಮತ್ತೆ ಆರಂಭ

ಪಿಟಿಐ
Published 23 ನವೆಂಬರ್ 2023, 9:40 IST
Last Updated 23 ನವೆಂಬರ್ 2023, 9:40 IST
<div class="paragraphs"><p>ಉತ್ತರಕಾಶಿಯ&nbsp;ಸಿಲ್ಕ್ಯಾರಾದಲ್ಲಿನ ಸುರಂಗದ ಬಳಿ ರಕ್ಷಣಾ ಕಾರ್ಯಾಚರಣೆ</p></div>

ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿನ ಸುರಂಗದ ಬಳಿ ರಕ್ಷಣಾ ಕಾರ್ಯಾಚರಣೆ

   

ರಾಯಿಟರ್ಸ್ ಚಿತ್ರ

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಬುಧವಾರ ರಾತ್ರಿಯಿಡೀ ಎದುರಾದ ಅಡಚಣೆಯಿಂದಾಗಿ ವಿಳಂಬವಾಗಿದ್ದ ಕಾರ್ಯಾಚರಣೆಯನ್ನು ಗುರುವಾರ ಬೆಳಿಗ್ಗೆ ಮತ್ತೆ ಆರಂಭಿಸಲಾಗಿದೆ.

ADVERTISEMENT

ಪ್ರಧಾನ ಮಂತ್ರಿ ಕಚೇರಿಯ ಮಾಜಿ ಸಲಹೆಗಾರ ಭಾಸ್ಕರ್‌ ಖುಲ್ಬೆ ಅವರು ಸ್ಥಳದಲ್ಲಿದ್ದಾರೆ. ಅವರು, ಕಾರ್ಮಿಕರನ್ನು ಹೊರಗೆ ಕರೆತರಲು ಕೊರೆಯುತ್ತಿದ್ದ ಮಾರ್ಗಕ್ಕೆ ಕಬ್ಬಿಣದ ಮೆಷ್‌ ಅಡ್ಡ ಬಂದಿತ್ತು. ಇದರಿಂದಾಗಿ, ಕೊರೆಯುವುದನ್ನು ನಿಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಖುಲ್ಬೆ, ಕಬ್ಬಿಣದ ಮೆಷ್‌ ತೆರವುಗೊಳಿಸಿದ ಬಳಿಕ ಕೊರೆಯುವಿಕೆ ಪೂರ್ಣಗೊಳ್ಳಲು 12ರಿಂದ 14 ಗಂಟೆ ಬೇಕಾಗುತ್ತದೆ. ಬಳಿಕ ಉಕ್ಕಿನ ಪೈಪ್‌ ಸೇರಿಸಿ, ಅದರಲ್ಲಿ ಸಣ್ಣ ಸ್ಟ್ರೆಚರ್‌ ಅಳವಡಿಸಲಾಗುತ್ತದೆ. ಅದರ ಮೂಲಕ ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರಗೆಳೆಯಲಾಗುತ್ತದೆ. ಈ ಪ್ರಕ್ರಿಯೆಗೆ ಹೆಚ್ಚುವರಿಯಾಗಿ 3 ಗಂಟೆ ಬೇಕಾಗಬಹುದು ಎಂದಿದ್ದಾರೆ.

ಉತ್ತರಾಖಂಡದ ಉತ್ತರಕಾಶಿ ಪಟ್ಟಣಕ್ಕೆ ಸಮೀಪದಲ್ಲಿರುವ ಗಂಗೋತ್ರಿ–ಯಮುನೋತ್ರಿ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಸರ್ವಋತು ಸುರಂಗದ ಕೆಲಭಾಗ ನವೆಂಬರ್ 12ರಂದು ಕುಸಿದಿದೆ. ಗಂಗೋತ್ರಿ, ಯಮುನೋತ್ರಿ, ಬದರೀನಾಥ ಮತ್ತು ಕೇದಾರನಾಥಕ್ಕೆ ವರ್ಷದ ಎಲ್ಲಾ ದಿನಗಳಲ್ಲೂ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ 'ಚಾರ್‌ಧಾಮ್‌ ಕಾರಿಡಾರ್‌' ಯೋಜನೆಯ ಭಾಗವಿದು.

ಕುಸಿದಿರುವ ಅವಶೇಷಗಳ ಮೂಲಕ ಕಾರ್ಮಿಕರು ಸಿಲುಕಿರುವತ್ತ 57 ಮೀಟರ್‌ವರೆಗೆ ಕೊರೆಯಲಾಗುತ್ತಿದೆ. ಕಾರ್ಯಾಚರಣೆಯು ಬುಧವಾರ ರಾತ್ರಿಯೇ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಕಬ್ಬಿಣದ ಮೆಷ್‌ ಅಡ್ಡಬಂದ ಕಾರಣ, ಕಾರ್ಯಾಚರಣೆ ಆರು ಗಂಟೆಯಷ್ಟು ವಿಳಂಬವಾಗಿತ್ತು.

ಈ ಯೋಜನೆ ಆರಂಭಿಸಿದಾಗಲೇ, ಹಿಮಾಲಯದ ಭೌಗೋಳಿಕ ಸ್ಥಿತಿ ಮತ್ತು ಅಸ್ಥಿರ ನೆಲವನ್ನು ಪರಿಗಣಿಸದೆ ಯೋಜನೆ ರೂಪಿಸಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.