ಚಂಡೀಗಡ: ಉತ್ತರಾಖಂಡದಲ್ಲಿ ಹಿಮನದಿ ದುರಂತದ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮಂಗಳವಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಉತ್ತರಾಖಂಡ ರಾಜ್ಯ ವಿಪತ್ತು ಪರಿಹಾರ ನಿಧಿಗೆ ₹ 11 ಕೋಟಿ ಗಳನ್ನು ನೀಡಿದ್ದಾರೆ.
ದುರಂತ ಮತ್ತು ಬಿಕ್ಕಟ್ಟಿನ ಈ ಸಮಯದಲ್ಲಿ ಹರಿಯಾಣ ಸರ್ಕಾರ ಉತ್ತರಾಖಂಡದೊಂದಿಗೆ ನಿಂತಿದೆ ಮತ್ತು ವಿಪತ್ತನ್ನು ಎದುರಿಸಲು ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಖಟ್ಟರ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭಾನುವಾರ ಹಿಮಪಾತವಾಗಿ ಅಲಕಾನಂದ ನದಿಯಲ್ಲಿ ಪ್ರವಾಹ ಉಂಟಾದ ಬಳಿಕ ಜಲವಿದ್ಯುತ್ ಕೇಂದ್ರಗಳು ಕೊಚ್ಚಿಹೋಗಿವೆ. ಘಟನೆಯಲ್ಲಿ ವಿದ್ಯುತ್ ಸ್ಥಾವರಗಳಲ್ಲಿ ಕೆಲಸ ಮಾಡುತ್ತಿದ್ದವರು ಮತ್ತು ಸ್ಥಳೀಯರು ಸೇರಿ ಸುಮಾರು 125 ಜನರು ಕಣ್ಮರೆಯಾಗಿದ್ದರು.
ಈ ಸಂಬಂಧ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ ಸುರಂಗದೊಳಗೆ ಸಿಕ್ಕಿಬಿದ್ದಿದ್ದ ಸುಮಾರು 30 ಕಾರ್ಮಿಕರನ್ನು ತಲುಪಲು ಅನೇಕ ರಕ್ಷಣಾ ಪಡೆಗಳು ಪ್ರಯತ್ನಿಸುತ್ತಿರುವ ಮಧ್ಯೆಯೇ ಸಾವಿನ ಸಂಖ್ಯೆ 31ಕ್ಕೆ ಏರಿದೆ ಮತ್ತು ಇನ್ನು 175 ಜನರನ್ನು ರಕ್ಷಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.