ADVERTISEMENT

ರಕ್ಷಣಾ ಕಾರ್ಯಾಚರಣೆ ಯಶಸ್ವಿ: ಕತ್ತಲಾದಂತೆ ಆವರಿಸಿದ ಸಂಭ್ರಮದ ‘ಬೆಳಕು’ 

ಸಿಲ್ಕ್ಯಾರಾ: ಕುಟುಂಬಸ್ಥಗೆ ನೆಮ್ಮದಿಯ ಗಳಿಗೆ | ಗ್ರಾಮಸ್ಥರ ಸಂತಸ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 21:08 IST
Last Updated 28 ನವೆಂಬರ್ 2023, 21:08 IST
<div class="paragraphs"><p>41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾದ ಸಿಲ್ಕ್ಯಾರಾ ಸುರಂಗ ಬಳಿ ಮಂಗಳವಾರ ರಾತ್ರಿ ಕಂಡುಬಂದ ದೃಶ್ಯ</p></div>

41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾದ ಸಿಲ್ಕ್ಯಾರಾ ಸುರಂಗ ಬಳಿ ಮಂಗಳವಾರ ರಾತ್ರಿ ಕಂಡುಬಂದ ದೃಶ್ಯ

   

–ಪಿಟಿಐ ಚಿತ್ರ

ಡೆಹ್ರಾಡೂನ್: ಸತತ 17 ದಿನ ದುಗುಡ, ಚಿಂತೆ ಆವರಿಸಿದ್ದ ಅಷ್ಟು ಜನರ ಮುಖಗಳಲ್ಲಿ ಮಂಗಳವಾರ ಸಂಭ್ರಮ ಮನೆ ಮಾಡಿತ್ತು. ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ಕಾರ್ಯದಲ್ಲಿ ‘ರ‍್ಯಾಟ್‌ ಮೈನರ್ಸ್’ ತೊಡಗಿಕೊಂಡ  ಹಿಂದೆಯೇ, ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ಕುಟುಂಬಗಳ ಸದಸ್ಯರಲ್ಲಿ ಆಶಾವಾದ, ಭರವಸೆಯ ಚಿಗುರೊಡೆದಿತ್ತು.

ADVERTISEMENT

ಸುರಂಗದಿಂದ ಕಾರ್ಮಿಕರು ಹೊರ ಬರುವ ಕ್ಷಣ ಸಮೀಪಿಸುತ್ತಿದ್ದಂತೆ, ಕುಟುಂಬ ಸದಸ್ಯರ ಸಂತಸವೂ ಇಮ್ಮಡಿ ಸುತ್ತಿತ್ತು. ಒಬ್ಬೊಬ್ಬ ಕಾರ್ಮಿಕರೇ ಸುರಕ್ಷಿತವಾಗಿ ಹೊರಬಂದಂತೆ ಹೊರಗೆ ಕಾಯುತ್ತಿದ್ದ ಕುಟುಂಬಸ್ಥರು ಹರ್ಷೋದ್ಘಾರ ಹೊರಹೊಮ್ಮಿಸಿದರು. ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಿದ್ದ ಸಮೀಪದ ಗ್ರಾಮಗಳ ನಿವಾಸಿಗಳ ನಗುವು ಇವರಿಗೆ ಜೊತೆಯಾಯಿತು.

‘ಇಂದು ಅವರು ಹೊರಬರುವುದು ನಿಶ್ಚಿತ’ ಎಂದು ವಿಶ್ವಾಸದ ಮಾತನ್ನಾಡಿದವರು 16 ವರ್ಷದ ಬಾಲಕಿ ಬಿದಂಗ್‌ ನಾರ್ಜರಿ. ಈಕೆ, ಇವರ ತಂದೆ ರಾಮಪ್ರಸಾದ್ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಲ್ಲಿ ಒಬ್ಬರಾಗಿದ್ದರು. ಬಿದಂಗ್ ಇವರ ಒಬ್ಬಳೇ ಮಗಳು. ಅಸ್ಸಾಂನ ಬೊಡೊ ಸಮುದಾಯದ ಇವರು ಉತ್ತಮ ಕೆಲಸ ಅರಸಿ ಉತ್ತರಾಖಂಡಕ್ಕೆ ತೆರಳಿದ್ದರು.

‘ಇಷ್ಟು ದಿನ ನಿದ್ರೆಯಿಲ್ಲದ ರಾತ್ರಿ ಗಳನ್ನು ಕಳೆದಿದ್ದೇವೆ. ಸರಿಯಾಗಿ ಊಟ ಮಾಡಲು ಆಗುತ್ತಿರಲಿಲ್ಲ. ತಂದೆಯೂ ಸುರಂಗದಲ್ಲಿ ಸಿಲುಕಿದ್ದ ಸುದ್ದಿ ತಿಳಿದಾಗಿನಿಂದ ತಾಯಿ ಹಲವು ಬಾರಿ ಜ್ಞಾನತಪ್ಪಿದ್ದರು’ ಎಂದು ಮಂಗಳವಾರ ತಂದೆಯ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ ಬಳಿಕ ‘ಪ್ರಜಾವಾಣಿ’ ಜೊತೆಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ರಕ್ಷಣಾ ಕಾರ್ಯ ನಡೆಯುತ್ತಿದ್ದ ಸುರಂಗದ ಬಳಿ 17ನೇ ದಿನವಾದ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ‘ಕಾರ್ಮಿಕರ ರಕ್ಷಣೆ ಹಾಗೂ ಅವರು ಸುರಕ್ಷಿತವಾಗಿ ಬರಬೇಕು ಎಂದು ಕೋರಿ ನಾವು ನಿತ್ಯ ಬಾಬಾ ಬೈಕನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಆ ಕಾರ್ಮಿಕರು ನಮ್ಮ ಕುಟುಂಬದ ಸದಸ್ಯರಂತೆಯೇ’ ಎಂದು ಸ್ಥಳದಲ್ಲಿದ್ದ ಮಹಿಳೆಯೊಬ್ಬರು ತಿಳಿಸಿದರು.

ಆಸುಪಾಸಿನ ಬ್ರಹ್ಮಕಾಲ್, ವಾನ್‌, ಮೌಜ್‌ಗಾಂವ್ ಹಾಗೂ ಆಸುಪಾಸಿನ ಗ್ರಾಮಗಳ ನಿವಾಸಿಗಳು ಸೇರಿದ್ದರು. ಸ್ಥಳದಲ್ಲಿ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನೂ ನಿಯೋಜಿಸಲಾ
ಗಿತ್ತು. ‘ಉತ್ತರಕಾಶಿ’ ಎಂಬ ಈ ಗ್ರಾಮದ ಹೆಸರು ಕೆಲವು ದಿನಗಳಿಂದ ಅಂತರ
ರಾಷ್ಟ್ರೀಯ ಮಾಧ್ಯಮಗಳ ಗಮನವನ್ನೂ ಸೆಳೆದಿತ್ತು.

‘ನಮ್ಮ ಗ್ರಾಮದ ಹಲವು ಯುವಕರು ಸುರಂಗ ಕಾಮಗಾರಿ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಸುರಂಗ ಕಾರ್ಮಿಕರು ನಮ್ಮ ಗ್ರಾಮ, ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರೆಲ್ಲರೂ ನಮ್ಮ ಕುಟುಂಬಗಳ ಸದಸ್ಯರೇ ಆಗಿದ್ದಾರೆ’ ಎಂದು ಗಿನೋತಿ ಗ್ರಾಮದ ಪ್ರಧಾನ್ ಅನಿಲ್‌ ಸಿಂಗ್ ಜಯರ ಪ್ರತಿಕ್ರಿಯಿಸಿದರು.

ಗ್ರಾಮದ ಕೆಲ ಯುವಕರು ಕಳೆದ ಕೆಲವು ದಿನಗಳಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ. ಇಲ್ಲಿ ಬಂದು ರಕ್ಷಣಾ ಕಾರ್ಯಕ್ಕೆ ಸಾಕ್ಷಿಯಾಗುತ್ತಿದ್ದರು.

ಗುಂಗು ಗ್ರಾಮದ ತ್ರಿಪನ್ ಸಿಂಗ್‌ ಕುಮೈನ್‌ ಅವರು, ‘ಕೆಲವು ದಿನದ ಹಿಂದೆ ಸಿಲ್ಕ್ಯಾನಾ ಸುರಂಗದಲ್ಲಿ ನಾನೂ ಇದ್ದೆ. ಗ್ರಾಮೀಣ ಮಹಿಳೆಯರ ದೊಡ್ಡ ಮಟ್ಟದ ಹಾಜರಿ ನನಗೆ ಆಶ್ಚರ್ಯ ಉಂಟು ಮಾಡಿದೆ. ಅವರ ಕಾಳಜಿಗೆ ದೊಡ್ಡ ನಮಸ್ಕಾರ’ ಎಂದು ಹೇಳಿದರು. ಮಂಗಳವಾರ ರಾತ್ರಿ ಕತ್ತಲು ಮೂಡಿದಂತೆ, ಅಲ್ಲಿ ಸೇರಿದ್ದ ಜನರಲ್ಲಿ ಭರವಸೆ ಬೆಳಕು ಹೊಮ್ಮುತ್ತಿತ್ತು. ಸುರಕ್ಷಿತವಾಗಿ ಕಾರ್ಮಿಕರು ಸುರಂಗದಿಂದ ಹೊರಬಂದಂತೆ ಸಂತಸ ಅರಳುತ್ತಿತ್ತು.

ರ‍್ಯಾಟ್‌ ಮೈನಿಂಗ್ ಕಾರ್ಮಿಕರ ಕಾರ್ಯಕ್ಕೆ ಮೆಚ್ಚುಗೆ ಮಾತುಗಳು ಕೇಳಿಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.