ADVERTISEMENT

ತಮಟೆ ಬಾರಿಸಲು ದೇಗುಲಕ್ಕೆ ಬಾರದ ವ್ಯಕ್ತಿ: ದಲಿತ ಕುಟುಂಬಗಳಿಗೆ ಬಹಿಷ್ಕಾರ

ಪಿಟಿಐ
Published 18 ಜುಲೈ 2024, 13:57 IST
Last Updated 18 ಜುಲೈ 2024, 13:57 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಗೋಪೇಶ್ವರ: ಚಮೋಲಿ ಜಿಲ್ಲೆಯ ಹಳ್ಳಿಯೊಂದರ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ದಲಿತ ಸಮುದಾಯದ ವ್ಯಕ್ತಿಯೊಬ್ಬರು ಅನಾರೋಗ್ಯದ ಕಾರಣಕ್ಕೆ ದೇವಸ್ಥಾನದಲ್ಲಿ ತಮಟೆ ಬಾರಿಸಲು ಬಂದಿರಲಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತ–ಚೀನಾ ಗಡಿಗೆ ಸನಿಹದಲ್ಲಿ ಇರುವ ಸುಭಾಇ ಗ್ರಾಮದ ಪಂಚಾಯಿತಿಯವರು ಈ ಬಹಿಷ್ಕಾರವನ್ನು ಭಾನುವಾರ ಪ್ರಕಟಿಸಿದ್ದಾರೆ. ಈ ಗ್ರಾಮದಲ್ಲಿ ನಡೆಯುವ ಸಾಮಾಜಿಕ, ಸಾಂಸ್ಕೃತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮಟೆ ಬಾರಿಸುವ ಕೆಲಸವನ್ನು ತಲೆಮಾರುಗಳಿಂದ ಮಾಡುತ್ತ ಬಂದಿರುವ, ಪರಿಶಿಷ್ಟ ಜಾತಿಗೆ ಸೇರಿದ ಸರಿಸುಮಾರು ಆರು ಕುಟುಂಬಗಳು ಇಲ್ಲಿವೆ.

ADVERTISEMENT

ಆದರೆ, ಪರಿಶಿಷ್ಟ ಜಾತಿಗೆ ಸೇರಿದ ಪುಷ್ಕರ್ ಲಾಲ್‌ ಎನ್ನುವವರು ಅನಾರೋಗ್ಯದ ಕಾರಣದಿಂದಾಗಿ ತಮಟೆ ಬಾರಿಸಲು ಬರದಿದ್ದುದರ ಕಾರಣಕ್ಕೆ ಪಂಚಾಯಿತಿಯು ಇಡೀ ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದೆ.

ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವುದನ್ನು ಹಾಗೂ ಬಹಿಷ್ಕಾರದ ಆದೇಶವನ್ನು ಪಾಲಿಸದೆ ಇದ್ದರೆ ಗ್ರಾಮದ ಇತರರಿಗೂ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂಬುದರ ಘೋಷಣೆಯನ್ನು ಪಂಚಾಯತಿ ಸದಸ್ಯರೊಬ್ಬರು ಮಾಡುತ್ತಿರುವುದು ವಿಡಿಯೊ ಒಂದರಲ್ಲಿ ಸೆರೆಯಾಗಿದೆ.

ಪಂಚಾಯಿತಿಯ ಆದೇಶದ ಅನ್ವಯ, ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಗ್ರಾಮದ ಅರಣ್ಯ ಸಂಪನ್ಮೂಲ ಬಳಸುವಂತಿಲ್ಲ, ನೀರು ಬಳಸುವಂತಿಲ್ಲ, ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸುವಂತಿಲ್ಲ, ವಾಹನಗಳಲ್ಲಿ ಸಂಚರಿಸುವಂತಿಲ್ಲ ಮತ್ತು ದೇವಸ್ಥಾನಕ್ಕೆ ಬರುವಂತಿಲ್ಲ.

ಸಂತ್ರಸ್ತ ಕುಟುಂಬಗಳು ಜೋಶಿಮಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ. ರಾಮಕೃಷ್ಣ ಖಂಡ್ವಾಲ್ ಮತ್ತು ಯಶ್ವೀರ್ ಸಿಂಗ್ ಎನ್ನುವವರು ಬಹಿಷ್ಕಾರ ಆದೇಶದ ಸೂತ್ರಧಾರರು ಎಂದು ದೂರಿನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.