ಉತ್ತರಕಾಶಿ: ಕೇಂದ್ರ ಸರ್ಕಾರದ ಚಾರ್‌ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿರುವ ಸುರಂಗದ ಕೆಲಭಾಗಗಳು ಕಳೆದ ಭಾನುವಾರ (ನ.12) ಕುಸಿದು, 41 ಕಾರ್ಮಿಕರು ಸಿಲುಕಿಕೊಂಡಿದ್ದಾರೆ.
ಸುರಂಗದ ಅವಶೇಷದಡಿ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ಆರಂಭವಾಗಿ ಇಂದಿಗೆ 11ನೇ ದಿನ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅದೃಷ್ಟವಶಾತ್ ಸುರಂಗದೊಳಗೆ ಸಿಲುಕಿರುವ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ.
ರಕ್ಷಣಾ ತಂಡಗಳು ಹಗಲು ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ. ಸದ್ಯ ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಬಿಪಿ, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಾರ್ಮಿಕರ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ವಾಕಿಟಾಕಿ, ರೇಡಿಯೊ ಮೂಲಕ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗುತ್ತಿದ್ದು, ನಿರಂತರವಾಗಿ ವಿದ್ಯುತ್, ಆಮ್ಲಜನಕ, ಆಹಾರ, ನೀರು ಪೂರೈಸಲಾಗುತ್ತಿದೆ.
ಕಾರ್ಮಿಕರಿಗೆ ಸಾಕಷ್ಟು ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಸುರಂಗದಲ್ಲಿ ಅವಶೇಷಗಳ ನಡುವೆ 39 ಮೀಟರ್ (128 ಅಡಿ) ದೂರ ಕೊರೆಯಲಾಗಿದೆ. ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರಲು ಕನಿಷ್ಠ 57 ಮೀಟರ್‌ವರೆಗೆ ಸ್ಟೀಲ್ ಪೈಪ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
ಪೈಪ್ ಮೂಲಕ ಆಹಾರ
6 ಇಂಚಿನ ಪೈಪ್ ಮೂಲಕ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಬೆಣ್ಣೆ ಚಪಾತಿ, ವೆಜ್ ಪುಲಾವ್ ಮತ್ತು ಮಟರ್ ಪನೀರ್‌ನಂತಹ ಬೇಯಿಸಿದ ಆಹಾರ ಪದಾರ್ಥಗಳನ್ನು ರವಾನಿಸಲಾಗುತ್ತಿದೆ.
ನಾವು ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗಾಗಿ ವೆಜ್ ಪುಲಾವ್, ಮಟರ್ ಪನೀರ್ ಮತ್ತು ಬೆಣ್ಣೆ ಚಪಾತಿ ತಯಾರಿಸಿದ್ದು, ಪೈಪ್ ಮೂಲಕ ಆಹಾರವನ್ನು ಪೂರೈಸುತ್ತಿದ್ದೇವೆ ಎಂದು ಬಾಣಸಿಗ ಸಂಜೀತ್ ರಾಣಾ ಮಾಹಿತಿ ನೀಡಿದ್ದಾರೆ.
ಕಾರ್ಮಿಕರ ರಕ್ಷಣೆಗೆ ಅಮೆರಿಕದ ಯಂತ್ರ
ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗಾಗಿ ವಾಯುಪಡೆ ಮೂಲಕ ದೆಹಲಿಯಿಂದ ರಂಧ್ರ ಕೊರೆಯುವ ವಿಶೇಷ ಯಂತ್ರವನ್ನು ಗುರುವಾರ ತರಲಾಗಿದೆ.
ಈ ಯಂತ್ರದ ಮೂಲಕ ಸುರಂಗದಲ್ಲಿ ರಂಧ್ರ ಕೊರೆಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಸಣ್ಣ ಯಂತ್ರದ ಮೂಲಕ ಅವಶೇಷಗಳಡಿ ಸ್ಟೀಲ್ ಪೈಪ್‌ಗಳನ್ನು ಬಿಟ್ಟು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದರಿಂದ ಭಾರತೀಯ ವಾಯುಪಡೆಯು ಗುರುವಾರ ಸಿ–130 ಹರ್ಕ್ಯುಲಸ್ ಸಾಗಣೆ ವಿಮಾನಗಳ ಮೂಲಕ ಹೊಸ ಯಂತ್ರವನ್ನು ದೆಹಲಿಯಿಂದ ಉತ್ತರಕಾಶಿಗೆ ಸಾಗಿಸಿತ್ತು. ಈ ಯಂತ್ರ ಅಮೆರಿಕದಲ್ಲಿ ತಯಾರಾಗಿದೆ.
ರಕ್ಷಣಾ ಕಾರ್ಯಾಚರಣೆಗೆ ಅಂತರರಾಷ್ಟ್ರೀಯ ಸುರಂಗ ತಜ್ಞರು
ರಕ್ಷಣಾ ಕಾರ್ಯಾಚರಣೆಗೆ ಅಂತರರಾಷ್ಟ್ರೀಯ ಸುರಂಗ ತಜ್ಞರನ್ನು ಕರೆಸಲಾಗಿದೆ. ಇಂಟರ್‌ನ್ಯಾಶನಲ್ ಟನೆಲಿಂಗ್ ಅಂಡರ್‌ಗ್ರೌಂಡ್ ಸ್ಪೇಸ್ ಪ್ರೊಫೆಸರ್ ಆರ್ನಾಲ್ಡ್ ಡಿಕ್ಸ್ ಸಿಲ್ಕ್ಯಾರಾ ಸುರಂಗದ ಬಳಿ ಸಂತ್ರಸ್ತರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡ, ಕಾರ್ಮಿಕರತ್ತ ಮೂರನೇ ಎರಡರಷ್ಟು ದೂರದ ಮಾರ್ಗ ಕೊರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಮರಾದಲ್ಲಿ ಕಂಡ ಕಾರ್ಮಿಕರು, ಕುಟುಂಬಸ್ಥರಲ್ಲಿ ಆಶಾಭಾವನೆ
ಸುರಂಗದ ಒಳಕ್ಕೆ ಸೋಮವಾರ ಆರು ಇಂಚು ವ್ಯಾಸದ ಪೈಪ್ ತೂರಿಸುವ ಮೂಲಕ ಈ ಕ್ಯಾಮರಾ ಕಳುಹಿಸಲಾಗಿತ್ತು. ಹಳದಿ ಮತ್ತು ಬಿಳಿ ಬಣ್ಣದ ಹೆಲ್ಮೆಟ್ ಧರಿಸಿರುವ ಕಾರ್ಮಿಕರು, ಪೈಪ್ ಮೂಲಕ ಕಳುಹಿಸಿದ ಆಹಾರ ಸ್ವೀಕರಿಸುತ್ತಿರುವುದನ್ನು ಹಾಗೂ ಪರಸ್ಪರ ಮಾತಿನಲ್ಲಿ ತೊಡಗಿರುವುದನ್ನು ಕ್ಯಾಮೆರಾ ಸೆರೆ ಹಿಡಿದಿದೆ. ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳು ಈ ದೃಶ್ಯಾವಳಿಯನ್ನು ಬಿಡುಗಡೆ ಮಾಡಿತ್ತು.
ವಿಡಿಯೊದಲ್ಲಿ ಕಾರ್ಮಿಕರನ್ನು ನೋಡಿ ಅವರು ಕುಟುಂಬಸ್ಥರು ಕೊಂಚ ನಿರಾಳರಾಗಿದ್ದಾರೆ.
ಪ್ರಧಾನಿ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಜೊತೆ ಮಂಗಳವಾರ ಮಾತುಕತೆ ನಡೆಸಿದ್ದಾರೆ, ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿನ ಪ್ರಗತಿ ಬಗ್ಗೆ ವಿಚಾರಿಸಿದ್ದಾರೆ. ಪ್ರಧಾನಿ ಮೋದಿ ಅವರು ಸೋಮವಾರ ಕೂಡ ಧಾಮಿ ಅವರ ಜೊತೆ ಮಾತುಕತೆ ನಡೆಸಿದ್ದರು.
‘ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವುದು ನಮ್ಮ ಆದ್ಯತೆಯ ಕೆಲಸ ಎಂದು ಪ್ರಧಾನಿಯವರು ಹೇಳಿದ್ದಾರೆ’ ಎಂದು ಧಾಮಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
24 ಗಂಟೆಯೊಳಗೆ ಖುಷಿಯ ಸುದ್ದಿ...
11ನೇ ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿರುವ ರಕ್ಷಣಾ ತಂಡಕ್ಕೆ ಕಾರ್ಮಿಕರು ಇನ್ನು ಕೇವಲ 18 ಮೀಟರ್‌ಗಳಷ್ಟು ದೂರದಲ್ಲಿದ್ದಾರೆ. ಮುಂದಿನ 24 ಗಂಟೆಯೊಳಗೆ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ, ಖುಷಿಯ ಸುದ್ದಿ ಹೊರಬೀಳಲಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.