ADVERTISEMENT

ಸಿಲ್ಕ್ಯಾರಾ | ಪರ್ವತದ ಮಡಿಲಲ್ಲಿ ‘ಪವಾಡ’; 17 ದಿನಗಳ ಕತ್ತಲ ವಾಸ ಕೊನೆಗೂ ಅಂತ್ಯ

ಪಿಟಿಐ
Published 28 ನವೆಂಬರ್ 2023, 22:27 IST
Last Updated 28 ನವೆಂಬರ್ 2023, 22:27 IST
<div class="paragraphs"><p>ಸಿಲ್ಕ್ಯಾರಾ ಸುರಂಗದಿಂದ ಹೊರಬಂದ ಕಾರ್ಮಿಕರೊಬ್ಬರನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಆಲಂಗಿಸಿ ಖುಷಿಪಟ್ಟರು </p></div>

ಸಿಲ್ಕ್ಯಾರಾ ಸುರಂಗದಿಂದ ಹೊರಬಂದ ಕಾರ್ಮಿಕರೊಬ್ಬರನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಆಲಂಗಿಸಿ ಖುಷಿಪಟ್ಟರು

   

 –ಪಿಟಿಐ ಚಿತ್ರ

ಉತ್ತರಕಾಶಿ: ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಯ ನಡುವೆ ಮಂಗಳವಾರ ಸೂರ್ಯ ಮರೆಯಾಗಿ ಹೋದ ತುಸು ಹೊತ್ತಿನಲ್ಲಿ ‘ಆ’ 41 ಜೀವಗಳ ಬಾಳಿನಲ್ಲಿ ಹೊಸ ಸೂರ್ಯೋದಯವೇ ಆಯಿತು. ‘ಈಗ, ಇನ್ನೇನು ಸುರಂಗದಿಂದ ಹೊರಬರಲಿದ್ದಾರೆ’ ಎಂದು ಹಂಬಲಿಸಿ ಪರ್ವತದ ಎದುರು ಎರಡು ವಾರಗಳಿಂದಲೂ ಕಾದು ಕುಳಿತವರ ಮೊಗದಲ್ಲಿ ಕೊನೆಗೂ ಮಂದಹಾಸ ಮಿನುಗಿತು. 

ADVERTISEMENT

ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ–ಬಡಕೋಟ್ ಸುರಂಗದಲ್ಲಿ ಸಿಲುಕಿದ್ದ 41 ಮಂದಿ ಕಾರ್ಮಿಕರನ್ನು ರಕ್ಷಿಸಲು 17 ದಿನಗಳಿಂದ ನಡೆದಿದ್ದ ಹಿಮಾಲಯ ಸದೃಶ ಯತ್ನಕ್ಕೆ ಕೊನೆಗೂ ಜಯ ಸಿಕ್ಕಿತು. ಅಷ್ಟೂ ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರುವಲ್ಲಿ ರಕ್ಷಣಾ ಸಿಬ್ಬಂದಿ ಮಂಗಳವಾರ ರಾತ್ರಿ ಯಶಸ್ಸು ಕಂಡರು. ಭಾರತದಲ್ಲಿ ಇಂತಹ ಚಾರಿತ್ರಿಕ ಕಾರ್ಯಾಚರಣೆ ನಡೆದಿದ್ದು ಇದೇ ಮೊದಲು.

ಭಾರತೀಯ ಸೇನೆ ಸೇರಿದಂತೆ ಹಲವು ಏಜೆನ್ಸಿಗಳು ಭಾಗಿಯಾಗಿದ್ದ ರಕ್ಷಣಾ ಕಾರ್ಯಾಚರಣೆಗೆ ಮತ್ತೆ ಮತ್ತೆ ಅಡ್ಡಿಗಳು ಎದುರಾಗುತ್ತಿದ್ದವು. ಕಾರ್ಮಿಕರ ಕ್ಷೇಮವನ್ನು ಬಯಸುತ್ತಿದ್ದವರಲ್ಲಿ ಒಮ್ಮೆ ಭರವಸೆ ಚಿಗುರುತ್ತಿತ್ತು, ಕೆಲವೊಮ್ಮೆ ನಿರಾಸೆ ಕವಿಯುತ್ತಿತ್ತು. ಆದರೆ, ಭರವಸೆ ಹಾಗೂ ನಿರಾಸೆಯ ನಡುವೆ ನಡೆದಿದ್ದ ಹೊಯ್ದಾಟದಲ್ಲಿ ಕೊನೆಗೂ ಭರವಸೆಯೇ ಗೆದ್ದಿತು.

ಸುರಂಗದಲ್ಲಿ ಸಿಲುಕಿ, 17 ದಿನಗಳಿಂದ ಹೊರಜಗತ್ತನ್ನೇ ಕಾಣದಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ಬಿತ್ತರವಾದ ನಂತರದಲ್ಲಿ ದೇಶವಾಸಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ಹಂಚಿಕೊಂಡರು. ವಿಜ್ಞಾನ, ನಂಬಿಕೆ, ಪ್ರಾರ್ಥನೆ, ತಾಂತ್ರಿಕ ಪರಿಣತಿ ಹಾಗೂ ಶ್ರಮದ ಸಂಗಮಕ್ಕೆ ಸಿಕ್ಕ ಯಶಸ್ಸು ಇದು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕವಾಗಿ ಸಂತಸದ ಹೊನಲು ಹರಿಸಿದರು.

ಸುರಂಗದಿಂದ ಸುರಕ್ಷಿತವಾಗಿ ಹೊರಗೆ ಕರೆತರಲು ಅಳವಡಿಸಿದ್ದ 60 ಮೀಟರ್ ಉದ್ದದ ಪೈಪ್ ಮೂಲಕ ಕಾರ್ಮಿಕರು ಹೊರಬರುತ್ತಿದ್ದಂತೆಯೇ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರು, ಕಾರ್ಮಿಕರನ್ನು ಸ್ವಾಗತಿಸಿದರು. ಎನ್‌ಡಿಆರ್‌ಎಫ್‌ ಸಿಬ್ಬಂದಿ ಈ ಕಾರ್ಮಿಕರನ್ನು ಸುರಂಗದಿಂದ ಹೊರಗೆ ಕರೆತಂದರು.

ಭಾರಿ ಯಂತ್ರಗಳ ನೆರವಿಲ್ಲದೆಯೇ ಸುರಂಗ ಕೊರೆಯುವ ನಿಪುಣರ ತಂಡವು, ಸುರಂಗ ಕೊರೆಯುವ ಕೆಲಸವನ್ನು ಪೂರ್ಣಗೊಳಿಸಿದ ಸರಿಸುಮಾರು ಒಂದು ಗಂಟೆಯ ನಂತರದಲ್ಲಿ, ಕಾರ್ಮಿಕರನ್ನು ಹೊರಗೆ ತರಲಾಯಿತು.

ಕಾರ್ಮಿಕರು ಹೊರಬರುತ್ತಿದ್ದಂತೆ, ಕೆಲವರು ಸಂತಸದಿಂದ ‘ಹರ ಹರ ಮಹಾದೇವ’ ಎಂದು, ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದರು. ಸುರಂಗದ ಹೊರಬಂದ ಕಾರ್ಮಿಕರನ್ನು ಆಂಬುಲೆನ್ಸ್ ಮೂಲಕ ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಕಾರ್ಮಿಕರಿಗಾಗಿ 41 ಹಾಸಿಗೆಗಳ ವಿಶೇಷ ವಾರ್ಡ್‌ ಸಿದ್ಧವಾಗಿತ್ತು.

ಇದಕ್ಕೂ ಮೊದಲು ಕಾರ್ಮಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದ ಕಾರಣ, ಅಲ್ಲಿ ಕೆಲಸ ಮಾಡುತ್ತಿದ್ದ 41 ಮಂದಿ ಕಾರ್ಮಿಕರು ನವೆಂಬರ್ 12ರಿಂದಲೂ ಒಳಗೆ ಸಿಲುಕಿಕೊಂಡಿದ್ದರು. ಅವರಿಗೆ ಔಷಧ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಆರು ಇಂಚು ವ್ಯಾಸದ ಒಂದು ಪೈಪ್ ಮೂಲಕ ರವಾನಿಸಲಾಗುತ್ತಿತ್ತು.

ಪ್ರಧಾನಿ ಸಂತಸ: ಈ ರಕ್ಷಣಾ ಕಾರ್ಯವು ಎಲ್ಲರನ್ನೂ ಭಾವುಕವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಕಾರ್ಮಿಕರನ್ನು ಹೊರಗೆ ಕರೆತಂದ ನಂತರದಲ್ಲಿ ಎಕ್ಸ್‌ ಮೂಲಕ ಸಂತಸ ಹಂಚಿಕೊಂಡಿರುವ ಮೋದಿ, ‘ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರ ಧೈರ್ಯ ಮತ್ತು ದೃಢನಿಶ್ಚಯವು ಕಾರ್ಮಿಕರಿಗೆ ಹೊಸ ಜೀವನ ನೀಡಿದೆ’ ಎಂದು ಹೇಳಿದ್ದಾರೆ.

‘ಈ ಕಾರ್ಯದಲ್ಲಿ ತೊಡಗಿದ್ದ ಎಲ್ಲರೂ ಮಾನವೀಯತೆ ಹಾಗೂ ಒಂದು ತಂಡವಾಗಿ ಕೆಲಸ ಮಾಡುವುದಕ್ಕೆ ಅದ್ಭುತವಾದ ಉದಾಹರಣೆಯೊಂದನ್ನು ಸೃಷ್ಟಿಸಿಕೊಟ್ಟಿದ್ದಾರೆ’ ಎಂದು ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದಿದ್ದಾರೆ.

ಕಾರ್ಮಿಕರಿಗೆ ₹1 ಲಕ್ಷ ಪರಿಹಾರ: ಉತ್ತರಾಖಂಡ ಸಿ.ಎಂ.

* ಸುರಂಗ ಕೊರೆಯುವ ಯಂತ್ರಕ್ಕೆ ಮತ್ತೆ ಮತ್ತೆ ಅಡ್ಡಿ ಎದುರಾಗುತ್ತಿತ್ತು. ಭಾರಿ ಯಂತ್ರದ ಸಹಾಯವಿಲ್ಲದೆ ಸುರಂಗ ಕೊರೆದವರಿಗೆ ನಾನು ಧನ್ಯವಾದ ಅರ್ಪಿಸುವೆ.

* ಅತ್ಯಂತ ಕಿರಿಯ ವಯಸ್ಸಿನ ಕಾರ್ಮಿಕರನ್ನು ಮೊದಲು ಹೊರತರಲಾಯಿತು. ಅವರೆಲ್ಲ ಪೈಪ್‌ ಮೂಲಕ ತಾವಾಗಿಯೇ ಹೊರಗೆ ತೆವಳಿಕೊಂಡು ಬಂದರು.

* 41 ಕಾರ್ಮಿಕರಿಗೆ ಪ್ರತಿಯೊಬ್ಬರಿಗೂ ತಲಾ ₹1 ಲಕ್ಷ ಪರಿಹಾರ ನೀಡಲಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಸುರಂಗದ ಮರುಪರಿಶೀಲನೆ ನಡೆಸಲಾಗುತ್ತದೆ.

* ಯಾರ ಆರೋಗ್ಯಕ್ಕೂ ಆಪತ್ತು ಇಲ್ಲ. ಕಾರ್ಮಿಕರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗುತ್ತದೆ. ನಂತರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ.

(ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಯ ನಂತರದಲ್ಲಿ ಹೇಳಿದ್ದು...)

ನಮ್ಮ ಸ್ನೇಹಿತರು (ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರು) ಬಹುಕಾಲದ ಕಾಯುವಿಕೆಯ ನಂತರ ತಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಲಿದ್ದಾರೆ ಎಂಬುದು ಬಹಳ ತೃಪ್ತಿ ನೀಡುವ ಸಂಗತಿ‌.
ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.