ADVERTISEMENT

ಅಂಗವಿಕಲರಿಗೆ ಮನೆ ಬಾಗಿಲಲ್ಲೇ ಕೋವಿಡ್‌ ಲಸಿಕೆ: ಕೇಂದ್ರ ಸರ್ಕಾರ

ಕೇರಳದಲ್ಲಿ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣ

ಪಿಟಿಐ
Published 23 ಸೆಪ್ಟೆಂಬರ್ 2021, 18:52 IST
Last Updated 23 ಸೆಪ್ಟೆಂಬರ್ 2021, 18:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವದೆಹಲಿ (ಪಿಟಿಐ): ಅಂಗವಿಕಲರು ಹಾಗೂ ಸರಾಗವಾಗಿ ಓಡಾಡಲು ಆಗದವರಿಗೆ ಅವರ ಮನೆ ಬಾಗಿಲಲ್ಲಿಯೇ ಕೋವಿಡ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಗೃಹ ಸಚಿವಾಲಯದ ಅಧಿಕಾರಿಗಳು, ದೇಶದಲ್ಲಿ ಈಗಲೂ ಕೋವಿಡ್‌ ಎರಡನೇ ಅಲೆ ಇದೆ. ಆದರೆ, ನಿತ್ಯ ದಾಖಲಾಗುತ್ತಿದ್ದ ಹೊಸ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದರು.

ಕಳೆದ ವಾರ ದೇಶದಾದ್ಯಂತ ದಾಖಲಾಗಿರುವ ಹೊಸ ಪ್ರಕರಣಗಳಲ್ಲಿ ಶೇ 62.73ರಷ್ಟು ಕೇರಳದಲ್ಲಿಯೇ ಇದ್ದವು. ಸದ್ಯ, ಈ ರಾಜ್ಯದಲ್ಲಿ ಮಾತ್ರ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ ಎಂದು ಹೇಳಿದರು.

ADVERTISEMENT

ಪ್ರಸ್ತುತ ಒಟ್ಟು 33 ಜಿಲ್ಲೆಗಳಲ್ಲಿ ಈ ವಾರ ದೃಢೀಕರಣ ಪ್ರಮಾಣವು ಶೇ 10ಕ್ಕಿಂತಲೂ ಅಧಿಕವಾಗಿದೆ. 23 ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 5 ರಿಂದ 10ರಷ್ಟಿದೆ ಎಂದು ಅಧಿಕಾರಿಗಳು ವಿವರಿಸಿದರು.

ಕೋವಿಡ್‌ ಮಾರ್ಗಸೂಚಿ ನಿಯಮಗಳ ಪ್ರಕಾರ,ಕಂಟೈನ್ಮೆಂಟ್‌ ವಲಯಗಳು ಹಾಗೂ ದೃಢೀಕರಣ ಪ್ರಮಾಣವು ಶೇ 5ಕ್ಕೂ ಅಧಿಕವಾಗಿರುವ ಜಿಲ್ಲೆಗಳಲ್ಲಿ ಮುಂಬರುವ ಹಬ್ಬಗಳ ಋತುವಿನಲ್ಲಿ ಸಾಮೂಹಿಕವಾಗಿ ಗುಂಪುಗೂಡುವಿಕೆಯನ್ನು ಆದಷ್ಟು ತಪ್ಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಲಸಿಕೆ ಅಭಿಯಾನ: ದೇಶದಲ್ಲಿ ಶೇ 66ರಷ್ಟು ವಯಸ್ಕರಿಗೆ ಲಸಿಕೆ ನೀಡಲಾಗಿದೆ. ಶೇ 23ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್‌ ಲಸಿಕೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಶೇ 63.7ರಷ್ಟು, ನಗರ ಪ್ರದೇಶಗಳಲ್ಲಿ ಶೇ 35.4ರಷ್ಟು ಲಸಿಕೆ ನೀಡಲಾಗಿದೆ.68.2 ಲಕ್ಷ ಡೋಸ್‌ ಅನ್ನು ಲಸಿಕೆ ಕೇಂದ್ರಗಳಲ್ಲಿಯೇ ನೀಡಲಾಗಿದೆ ಎಂದರು.

ಭಾರತದಲ್ಲಿ ಕೋವಿಡ್‌ ಲಸಿಕೆ ಪಡೆದಿದ್ದರೂ 10 ದಿನದ ಕ್ವಾರಂಟೈನ್‌ ಕಡ್ಡಾಯಪಡಿಸಿರುವ ಬ್ರಿಟನ್‌ ಸರ್ಕಾರದ ನಿಯಮ ತಾರತಮ್ಯ ಕ್ರಮದಿಂದ ಕೂಡಿದ್ದಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದರು. ಉಭಯ ರಾಷ್ಟ್ರಗಳು ಈ ವಿಷಯ ಕುರಿತಂತೆ ಚರ್ಚೆ ಆರಂಭಿಸಿವೆ ಎಂದು ಹೇಳಿದರು.

ಪ್ರಮಾಣಪತ್ರ ಕನಿಷ್ಠ ನಿಯಮಗಳಿಗೆ ಪೂರಕವಾಗಿರಬೇಕು: ಬ್ರಿಟನ್
ಲಂಡನ್‌:
ವಿವಿಧ ದೇಶಗಳಿಂದ ಬರುವ ಪ್ರಯಾಣಿಕರು ಹಾಜರುಪಡಿಸುವ ಕೋವಿಡ್‌ ಲಸಿಕೆ ಪ್ರಮಾಣಪತ್ರವು ‘ಕನಿಷ್ಠ ನಿಯಮ‘ಗಳಿಗೆ ಪೂರಕವಾಗಿರಬೇಕು ಎಂದು ಬ್ರಿಟನ್‌ ಹೇಳಿದೆ.

ಅಂತರರಾಷ್ಟ್ರೀಯ ನಿಯಮಗಳಿಗೆ ಅನುಸಾರ ವಿಧಿಸಲಾದ ನಿಯಮ ಕುರಿತು ಭಾರತದ ಜೊತೆಗೆ ಚರ್ಚಿಸಲಾಗುತ್ತಿದೆ ಎಂದು ಬ್ರಿಟನ್‌ ಸರ್ಕಾರ ಹೇಳಿದೆ.

ಬುಧವಾರ ಬಿಡುಗಡೆ ಮಾಡಿರುವ ನಿಯಮಗಳಂತೆ, ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ ಉತ್ಪಾದಿಸಿರುವ, ಆಕ್ಸ್‌ಫರ್ಡ್‌/ಆಸ್ಟ್ರಾಜೆನೆಕಾ ಲಸಿಕೆ ಪಡೆದವರೂ ದೇಶಕ್ಕೆ ಪ್ರಯಾಣಿಸಲು ಅರ್ಹರಾಗಿದ್ದಾರೆ.

ಚೇತರಿಕೆ ನಂತರದ ಸವಾಲು ಎದುರಿಸಲು ಮಾರ್ಗದರ್ಶಿ ಸಲಹೆ
ನವದೆಹಲಿ
: ಕೋವಿಡ್‌ ಚೇತರಿಕೆ ನಂತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಗುರುವಾರ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಿದರು.

ಸಚಿವಾಲಯವು, ಚಿಕಿತ್ಸೆ ನೀಡುವಲ್ಲಿ ವೈದ್ಯರು, ಶುಶ್ರೂಷಕರು, ಸಮುದಾಯ ಆರೋಗ್ಯ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ, ದಕ್ಷತೆಹೆಚ್ಚಿಸಲುಈ ಮಾರ್ಗದರ್ಶಿ ಸೂತ್ರಗಳು ನೆರವಾಗಲಿದೆ ಎಂದು ಹೇಳಿಕೆ ನೀಡಿದೆ.

ಚೇತರಿಕೆ ನಂತರ ಸಮಸ್ಯೆ ಕಾಡದಂತೆ ಕನಿಷ್ಠ ಅಡ್ಡಪರಿಣಾಮವುಳ್ಳ ಔಷಧ ಪಡೆಯಬೇಕು. ಆರಂಭದಲ್ಲೇ ಎಚ್ಚರವಹಿಸಿದರೆ ಪರಿಣಾಮಕಾರಿಯಾಗಿಸಮಸ್ಯೆ ನಿಭಾಯಿಸಬಹುದು ಎಂದೂ ಸಚವರು ಹೇಳಿದ್ದಾರೆ.

ಚೇತರಿಕೆಯ ನಂತರ ರೋಗಿಗಳಿಗೆ ಕಾಡುವ ಆತಂಕ, ಮಾನಸಿಕ ಆರೋಗ್ಯ ಸಂಬಂಧಿತ ಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಅಗತ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು, ಆರೋಗ್ಯ ಸೇವೆಯ ಮುಂಚೂಣಿ ಕಾರ್ಯಕರ್ತರಿಗೂ ಚೇತರಿಕೆ ಚಿಕಿತ್ಸೆ ಕ್ರಮ ಕುರಿತು ಅಗತ್ಯ ಮಾಹಿತಿ ಮತ್ತು ತರಬೇತಿಯನ್ನು ಒದಗಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.