ನವದೆಹಲಿ: 45 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಏಪ್ರಿಲ್ 1ರಿಂದ ಕೋವಿಡ್–19ರ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ದೇಶದ 17 ರಾಜ್ಯಗಳಲ್ಲಿ ಕೋವಿಡ್–19 ಎರಡನೇ ಅಲೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಮಂಗಳವಾರ ಈ ನಿರ್ಧಾರ ಕೈಗೊಂಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಈ ವಿಷಯ ತಿಳಿಸಿದ ಸಚಿವ ಪ್ರಕಾಶ್ ಜಾವಡೇಕರ್, ‘45 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹರು ಕೂಡಲೇ ನೋಂದಾಯಿಸಿಕೊಂಡು, ಲಸಿಕೆ ಪಡೆಯಬೇಕು’ ಎಂದರು.
ಕೋವಿಶೀಲ್ಡ್‌ನ ಎರಡನೇ ಲಸಿಕೆ ನೀಡುವುದನ್ನು 8 ವಾರಗಳ ಕಾಲ ಮುಂದೂಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲು ನಿರ್ಧರಿಸಿದೆ.
ಸಚಿವಾಲಯದ ಈ ನಿರ್ಧಾರಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೀಗಾಗಿ, 45 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಸಿಗಲಿದೆ.
ಪರೀಕ್ಷೆ ಹೆಚ್ಚಳಕ್ಕೆ ಸೂಚನೆ: ಕೋವಿಡ್–19 ಪ್ರಕರಣಗಳು ಹೆಚ್ಚುತ್ರಿರುವ ಹಿನ್ನೆಲೆಯಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಕೆಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
‘ಪರೀಕ್ಷೆ– ಪತ್ತೆ ಕಾರ್ಯ ಹಾಗೂ ಚಿಕಿತ್ಸೆ’ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಆದ್ಯತಾ ಗುಂಪುಗಳಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದೂ ಸೂಚಿಸಿದೆ.
ಏಪ್ರಿಲ್ ಅವಧಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಪರೀಕ್ಷೆಗಳನ್ನು ಹೆಚ್ಚಿಸುವ ಜೊತೆಗೆ ಕೋವಿಡ್ ದೃಢಪಟ್ಟವರನ್ನು ತ್ವರಿತವಾಗಿ ಕ್ವಾರಂಟೈನ್‌ಗೆ ಒಳಪಡಿಸಬೇಕು ಹಾಗೂ ಸಕಾಲಕ್ಕೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವಾಲಯ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.