ವಿಶ್ವಸಂಸ್ಥೆ:ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ನಾಯಕ ಅಟಲ್ ಬಿಹಾರಿ ವಾಜಪೇಯಿ. ವಿದೇಶಾಂಗ ಸಚಿವರಾಗಿ ದೇಶವನ್ನು ಪ್ರತಿನಿಧಿಸಿದ್ದ ಅವರು, ಅಣುನಿಶ್ಯಸ್ತ್ರೀಕರಣ, ಭಯೋತ್ಪಾದನೆ ಕುರಿತು ವಿಶ್ವವೇದಿಕೆಯಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.
ವಿದೇಶಾಂಗ ಸಚಿವರಾಗಿ ಮತ್ತು ಪ್ರಧಾನಿಯಾಗಿ 1977ರಿಂದ 2003ರ ಅವಧಿಯಲ್ಲಿ ಏಳು ಬಾರಿ ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದರು.
ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ, 1977ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 32ನೇ ಸಮಾವೇಶದಲ್ಲಿ ಮಾತನಾಡಿದ್ದರು.
‘ವಿಶ್ವಸಂಸ್ಥೆಗೆ ನಾನು ಹೊಸಬ. ಆದರೆ, ಭಾರತವಲ್ಲ. ವಿಶ್ವಸಂಸ್ಥೆಯು ರಚನೆಯಾದಾಗಿನಿಂದ ಭಾರತವು ಈ ಸಂಘಟನೆಯೊಂದಿಗೆ ಕ್ರಿಯಾಶೀಲ ಸಂಬಂಧ ಹೊಂದಿದೆ’ ಎಂದು ಅವರು ಮಾತನಾಡಿದ್ದರು.
‘ಎರಡು ದಶಕಗಳಿಗೂ ಹೆಚ್ಚು ಕಾಲ ನಾನು ಸಂಸದನಾಗಿ ದೇಶದ ಸಂಸತ್‌ನಲ್ಲಿದ್ದೇನೆ. ಆದರೆ, ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ದೇಶವನ್ನು ಪ್ರತಿನಿಧಿಸಿ ಮಾತನಾಡುತ್ತಿರುವುದು ವಿಶೇಷ ಅನುಭವ ನೀಡುತ್ತಿದೆ’ ಎಂದು ವಾಜಪೇಯಿ ಸಂತಸ ವ್ಯಕ್ತಪಡಿಸಿದ್ದರು.
‘ಭಾರತವು ಎಲ್ಲ ದೇಶಗಳೊಂದಿಗೆ ಶಾಂತಿ, ಅಲಿಪ್ತ ಮತ್ತು ಸೌಹಾರ್ದ ಸಂಬಂಧ ಹೊಂದುವುದಕ್ಕೆ ಬದ್ಧವಾಗಿದೆ’ ಎಂದು ಹೇಳಿದ್ದರು.
ಇಂಗ್ಲಿಷ್‌ನಲ್ಲಿಯೂ ಸುಲಲಿತವಾಗಿ ಮಾತನಾಡುತ್ತಿದ್ದ ವಾಜಪೇಯಿ, ವಿಶ್ವಸಂಸ್ಥೆಯಲ್ಲಿ ಪ್ರತಿ ಬಾರಿ ಭಾಷಣ ಮಾಡುವಾಗ ಹಿಂದಿಗೇ ಆದ್ಯತೆ ನೀಡುತ್ತಿದ್ದರು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹಿಂದಿಯನ್ನು ಎತ್ತಿಹಿಡಿಯುವ ಉದ್ದೇಶ ಅವರದ್ದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.