ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಭಾನುವಾರ ವಾಜಪೇಯಿ ಅವರ ಸ್ಮಾರಕ ‘ಸದೈವ ಅಟಲ್‘ಗೆ ತೆರಳಿ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ‘ವಾಜಪೇಯಿ ಅವರ ದೇಶಪ್ರೇಮ, ಕರ್ತವ್ಯನಿಷ್ಠೆ ಮತ್ತು ಸಮರ್ಪಣಾಭಾವವು ಯಾವಾಗಲೂ ರಾಷ್ಟ್ರದ ಸೇವೆ ಮಾಡಲು ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತದೆ. ಅವರು ಭಾರತದ ರಾಜಕೀಯದ ಶಿಖರವಿದ್ದಂತೆ. ವಿಶ್ವವು ಭಾರತದ ಸಾಮರ್ಥ್ಯವನ್ನು ಅರಿತು ಪ್ರಜೆಗಳು ರಾಷ್ಟ್ರದ ಬಗ್ಗೆ ಹೆಮ್ಮೆಯ ಭಾವವನ್ನು ಮೂಡುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ‘ ಎಂದು ಹೇಳಿದರು.
ವಾಜಪೇಯಿ ಜನ್ಮದಿನವನ್ನು ‘ಉತ್ತಮ ಆಡಳಿತ ದಿನ‘ವಾಗಿ ಆಚರಿಸಿದ ಸಮಾರಂಭದಲ್ಲಿ ಭಾಗವಹಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾತನಾಡಿ ‘ವಾಜಪೇಯಿ ಅವರ ಮುಂದಾಳತ್ವದಲ್ಲಿ ಭಾರತವು ಮೂಲ ಸೌಕರ್ಯ ಮತ್ತು ಪರಮಾಣು ಶಕ್ತಿ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.