ADVERTISEMENT

ಮತಾಂತರದ ಒತ್ತಡದಿಂದ ವಿದ್ಯಾರ್ಥಿನಿ ಆತ್ಮಹತ್ಯೆ: ಬಿಜೆಪಿ ಶಾಸಕಿ

ಪಿಟಿಐ
Published 22 ಜನವರಿ 2022, 16:08 IST
Last Updated 22 ಜನವರಿ 2022, 16:08 IST
ಬಿಜೆಪಿ ಶಾಸಕಿ ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾನತಿ ಶ್ರೀನಿವಾಸನ್‌
ಬಿಜೆಪಿ ಶಾಸಕಿ ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾನತಿ ಶ್ರೀನಿವಾಸನ್‌   

ಕೊಯಮತ್ತೂರು: ಮತಾಂತರದ ಒತ್ತಡದಿಂದ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕಿ ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾನತಿ ಶ್ರೀನಿವಾಸನ್‌ ಒತ್ತಾಯಿಸಿದ್ದಾರೆ.

'ಮತಾಂತರಕ್ಕೆ ಬಲವಂತ ಪಡಿಸಿ, ವಿದ್ಯಾರ್ಥಿನಿಗೆ ಹಿಂಸೆ ನೀಡಲಾಗಿದೆ. ಒತ್ತಡವನ್ನು ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲವರ ಹೆಸರನ್ನು ವಿದ್ಯಾರ್ಥಿನಿ ವಿಡಿಯೊ ಸಂದೇಶದಲ್ಲಿ ಹೇಳಿದ್ದಾಳೆ' ಎಂದು ವಾನತಿ ಶ್ರೀನಿವಾಸನ್‌ ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ಪೋಷಕರು ದೂರು ದಾಖಲಿಸಿದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಪ್ರತಿಭಟನೆಗಳು ನಡೆದ ಬಳಿಕವಷ್ಟೇ ಶಾಲೆಯ ವಿದ್ಯಾರ್ಥಿ ನಿಲಯದ ವಾರ್ಡನ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ತಂಜಾವೂರ್‌ನ ಎಸ್‌ಪಿ ರಾವಲಿ ಪ್ರಿಯಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮಾತಾಂತರದ ಒತ್ತಡ ಇದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದಿದ್ದಾರೆ. ಹಾಗಾಗಿ ಇತರ ಪೊಲೀಸ್‌ ಅಧಿಕಾರಿಗಳ ಮೂಲಕ ತನಿಖೆ ನಡೆಸಬೇಕು. ವಿದ್ಯಾರ್ಥಿನಿಯ ಪೋಷಕರಿಗೆ ಪರಿಹಾರ ಧನ ನೀಡಬೇಕು ಎಂದು ವಾನತಿ ಅವರು ಸಿಎಂ ಎಂಕೆ ಸ್ಟಾಲಿನ್‌ ಅವರನ್ನು ಒತ್ತಾಯಿಸಿದ್ದಾರೆ.

ADVERTISEMENT

'ಜನವರಿ 9ರಂದು ವಿದ್ಯಾರ್ಥಿನಿ ವಿಷ ಸೇವಿಸಿದ್ದಾಳೆ. ಜನವರಿ 15ರಂದು ಆಕೆಯ ಸ್ಥಿತಿ ಗಂಭೀರಗೊಂಡಿದ್ದು, ತಂಜಾವುರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನವರಿ 19ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ಜನವರಿ 9ರಂದು ವಿದ್ಯಾರ್ಥಿ ನಿಲಯದ ಕೆಲಸಗಳನ್ನು ಮಾಡುವಂತೆ ವಾರ್ಡನ್‌ ಒತ್ತಡ ಹೇರಿದ್ದಾರೆ. ಹಿಂಸೆಯನ್ನು ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ' ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಕೆ ಅಣ್ಣಮಲೈ ಅವರು, 'ಬಲವಂತ ಮತಾಂತರ ನಿಲ್ಲಬೇಕು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಬೇಕು' ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.