ADVERTISEMENT

ಇ–ಸಿಗರೇಟ್‌ ನಿಷೇಧ ನಿಯಮ ಉಲ್ಲಂಘನೆ: ಕೇಂದ್ರದಿಂದ ಸಾರ್ವಜನಿಕ ಪ್ರಕಟಣೆ

ಪಿಟಿಐ
Published 22 ಮೇ 2023, 14:23 IST
Last Updated 22 ಮೇ 2023, 14:23 IST
.
.   

ನವದೆಹಲಿ: ನಿಷೇಧದ ಆದೇಶವಿದ್ದರೂ ಕೂಡ ಇ–ಸಿಗರೇಟ್‌ಗಳು ಆನ್‌ಲೈನ್‌ನಲ್ಲಿ ಮುಕ್ತವಾಗಿ ಲಭ್ಯವಾಗುತ್ತಿದ್ದು, ತಂಬಾಕು ಉತ್ಪನ್ನಗಳ ಮಳಿಗೆಗಳಲ್ಲೂ ಇವುಗಳನ್ನು ನಿರಾತಂಕವಾಗಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು ಈ ಕುರಿತಾಗಿ ಹಿಂದೆ ಹೊರಡಿಸಿದ್ದ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೋಮವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

2019ರಲ್ಲಿ ಕೇಂದ್ರವು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ (ಉತ್ಪಾದನೆ, ಆಮದು, ರಫ್ತು, ಮಾರಾಟ, ವಿತರಣೆ, ಸಂಗ್ರಹ ಹಾಗೂ ಜಾಹೀರಾತಿನ ಮೂಲಕ ಪ್ರಚಾರ) ಕಾಯ್ದೆಯನ್ನು ಅನುಷ್ಠಾನಗೊಳಿಸಿತ್ತು. 

‘ಉತ್ಪಾದಕರು, ಆಮದು ಅಥವಾ ರಫ್ತು ಮಾಡುವವರು, ಮಾರಾಟಗಾರರು, ವಿತರಕರು, ದಾಸ್ತಾನು ಇಡುವವರು, ಜಾಹೀರಾತುದಾರರು, ಕೊರಿಯರ್‌ ಸೇರಿದಂತೆ ಇತರೆ ಮಾರ್ಗಗಳ ಮೂಲಕ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಣೆ ಮಾಡುವವರು, ಸಾಮಾಜಿಕ ಜಾಲತಾಣಗಳು ಹಾಗೂ ವೆಬ್‌ಸೈಟ್‌ಗಳ ಮೂಲಕ ಮಾರಾಟ ಮಾಡುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇ–ಸಿಗರೇಟ್‌ಗಳನ್ನು ಉತ್ಪಾದಿಸುವುದು ಇಲ್ಲವೇ ಮಾರಾಟ ಮಾಡುವುದು ನಿಷಿದ್ಧ. ಇವುಗಳ ಸೇವನೆಯನ್ನು ಉತ್ತೇಜಿಸುವ ಧಾಟಿಯಲ್ಲಿ ಜಾಹೀರಾತು ಪ್ರಕಟಿಸುವುದಕ್ಕೂ ಅವಕಾಶವಿಲ್ಲ’ ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ನಿರ್ದೇಶಿಸಲಾಗಿದೆ. 

ADVERTISEMENT

‘ಇ–ಸಿಗರೇಟ್‌ಗಳನ್ನು ಮಾರಾಟ ಮಾಡುವುದು ಇಲ್ಲವೇ ದಾಸ್ತಾನು ಇಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ’ ಎಂದೂ ಹೇಳಲಾಗಿದೆ. 

‘ನಿಷೇಧದ ಆದೇಶ ಇದ್ದರೂ ಕೂಡ ಇ–ಸಿಗರೇಟ್‌ಗಳು ಅಂಗಡಿಗಳು ಹಾಗೂ ಆನ್‌ಲೈನ್‌ ವೇದಿಕೆಗಳಲ್ಲಿ ಸುಲಭವಾಗಿ ಸಿಗುತ್ತಿವೆ. 18 ವರ್ಷದೊಳಗಿನವರಿಗೂ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ. ಯುವ ಪೀಳಿಗೆಯ ಹಿತವನ್ನು ಗಮನದಲ್ಲಿಟ್ಟುಕೊಂಡು ಇ–ಸಿಗರೇಟ್‌ಗಳನ್ನು ನಿಷೇಧಿಸಲಾಗಿತ್ತು. ಹೀಗಿದ್ದರೂ ಮಾರುಕಟ್ಟೆಯಲ್ಲಿ ಇವು ಕಡಿಮೆ ದರಕ್ಕೆ ಲಭ್ಯವಾಗುತ್ತಿವೆ. ಚೀನಾದಲ್ಲಿ ಉತ್ಪಾದಿಸಲಾಗಿರುವ ಕಳಪೆ ಗುಣಮಟ್ಟದ ಸಿಗರೇಟ್‌ಗಳನ್ನೂ ಮಾರಾಟ ಮಾಡಲಾಗುತ್ತಿದೆ’ ಎಂದು ವಾಲೆಂಟರಿ ಹೆಲ್ತ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ ನಿರ್ದೇಶಕ ಬಿನೊಯ್‌ ಮ್ಯಾಥ್ಯೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.