ವಾರಾಣಸಿ: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ದೆಹಲಿಯಲ್ಲಿರುವ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದ್ದು, ಉತ್ತರ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಅಜಯ್ ರೈ ಸಾಂಕೇತಿಕವಾಗಿ ತಮ್ಮ ಮನೆಯನ್ನು ರಾಹುಲ್‌ಗೆ ಅರ್ಪಿಸಿದ್ದಾರೆ.
ಮಾಜಿ ಶಾಸಕ ಮತ್ತು ಅವರ ಪತ್ನಿ ನಗರದ ಲಾಹುರಬೀರ್ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ‘ಮೇರಾ ಘರ್ ಶ್ರೀ ರಾಹುಲ್ ಗಾಂಧಿ ಕಾ ಘರ್’ (ನನ್ನ ಮನೆ ಶ್ರೀ ರಾಹುಲ್ ಗಾಂಧಿ ಅವರ ಮನೆ) ಎಂಬ ಬೋರ್ಡ್ ಹಾಕಿದ್ದಾರೆ.
ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆ ಕಾರ್ಯಾಲಯದ ನೋಟಿಸ್‌ಗೆ ಉತ್ತರಿಸಿರುವ ರಾಹುಲ್ ಗಾಂಧಿ ನಿಯಮಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.
‘ದೇಶದ ಸರ್ವಾಧಿಕಾರಿಗಳು ನಮ್ಮ ನಾಯಕ ರಾಹುಲ್ ಗಾಂಧಿ ಅವರ ನಿವಾಸವನ್ನು ಕಸಿದುಕೊಳ್ಳಲು ಬಯಸಿದ್ದಾರೆ. ಆದರೆ, ಅವರಿಗೆ ದೇಶದಾದ್ಯಂತ ಇರುವ ಕೋಟಿ ಕೋಟಿ ಕಾರ್ಯಕರ್ತರ ಮನೆಗಳು ರಾಹುಲ್ ಗಾಂಧಿಯವರದ್ದೇ ಎಂದು ತಿಳಿದಿಲ್ಲ. ಬಾಬಾ ವಿಶ್ವನಾಥ್ ನಗರದ ಲಾಹುರಬೀರ್ ಪ್ರದೇಶದಲ್ಲಿದ್ದ ನಮ್ಮ ಮನೆಯನ್ನು ರಾಹುಲ್ ಗಾಂಧಿಗೆ ಅರ್ಪಿಸಿದ್ದೇವೆ’ ಎಂದು ರೈ ತಿಳಿಸಿದ್ದಾರೆ.
ಕಾಶಿ ಸೇರಿದಂತೆ ಇಡೀ ಪ್ರಯಾಗ್‌ರಾಜ್ ಪ್ರದೇಶದಲ್ಲಿ ಗಾಂಧಿ ಪರ ಈ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
'ಗಾಂಧಿ ಕುಟುಂಬವು ಕೋಟ್ಯಂತರ ಮೌಲ್ಯದ ಪ್ರಯಾಗರಾಜ್‌ನಲ್ಲಿನ ಆನಂದ ಭವನವನ್ನು ದೇಶಕ್ಕೆ ಸಮರ್ಪಿಸಿದೆ. ರಾಹುಲ್ ಗಾಂಧಿಗೆ ಬಂಗಲೆ ತೆರವಿಗೆ ನೋಟಿಸ್ ಕಳುಹಿಸುವುದು ಬಿಜೆಪಿಯ ಹೇಡಿತನದ ಕೃತ್ಯವಾಗಿದೆ' ಎಂದು ರೈ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಜನರ ಹೃದಯದಲ್ಲಿ ಮನೆ ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಹೇಳಿದ್ದಾರೆ.
'ಅವರಿಗಾಗಿ, ಪ್ರತಿ ಮನೆಯು ತನ್ನ ಬಾಗಿಲುಗಳನ್ನು ತೆರೆದಿದೆ. ಏಕೆಂದರೆ ರಾಹುಲ್ ಗಾಂಧಿ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ಪ್ರಾರಂಭಿಸಲು ಪಣ ತೊಟ್ಟಿದ್ದಾರೆ. ನನ್ನ ನಾಯಕ, ನನ್ನ ಸ್ಫೂರ್ತಿ, ನನ್ನ ಸಹೋದರ ರಾಹುಲ್ 'ಮೇರಾ ಘರ್ ಆಪ್ಕಾ ಘರ್' ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಏಪ್ರಿಲ್ 22 ರೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ಸೋಮವಾರ ನೋಟಿಸ್ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.