ADVERTISEMENT

ಜ್ಞಾನವಾಪಿ: ಶಿವಲಿಂಗದ ಕಾರ್ಬನ್ ಡೇಟಿಂಗ್ ಮನವಿ ತಿರಸ್ಕರಿಸಿದ ವಾರಾಣಸಿ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2022, 9:55 IST
Last Updated 14 ಅಕ್ಟೋಬರ್ 2022, 9:55 IST
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ   

ವಾರಾಣಸಿ: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ 'ಶಿವಲಿಂಗ'ದ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ನಡೆಸಬೇಕು ಎಂದು ಸಲ್ಲಿಸಲಾಗಿರುವ ಮನವಿಯನ್ನು ವಾರಾಣಸಿ ನ್ಯಾಯಾಲಯ ತಿರಸ್ಕರಿಸಿದೆ.

ಶಿವಲಿಂಗದ ಕಾರ್ಬನ್ ಡೇಟಿಂಗ್ ಕುರಿತಾದ ತಮ್ಮ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಆದೇಶದ ಪ್ರತಿಗಾಗಿ ನಾವು ಕಾಯುತ್ತಿದ್ದೇವೆ. ಹೈಕೋರ್ಟ್ ಮೆಟ್ಟಿಲೇರುವ ಅವಕಾಶ ನಮಗೆ ಇದೆ. ನಮ್ಮ ವಾದವನ್ನು ಹೈಕೋರ್ಟ್ ಮುಂದೆ ಮಂಡಿಸುತ್ತೇವೆ ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ನ್ಯಾಯಾಲಯದ ಆದೇಶದ ಅನ್ವಯ ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದೊಳಗೆ ವಿಡಿಯೊ ಸಮೀಕ್ಷೆ ನಡೆಸಲಾಗಿತ್ತು. ಮುಸ್ಲಿಮರು ನಮಾಜ್‌ಗೂ ಮುನ್ನ ಬಳಸುತ್ತಿದ್ದ 'ವಝೂಖಾನ' ಕೊಳದ ಸಮೀಪ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಹಿಂದೂ ಪರ ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು. ಆ ಆಕೃತಿಯನ್ನು ಕಾರ್ಬನ್‌ ಡೇಟಿಂಗ್‌ಗೆ ಒಳಪಡಿಸಬೇಕು ಎಂದು ಜ್ಞಾನವಾಪಿ– ಶೃಂಗಾರ ಗೌರಿ ಮೊಕದ್ದಮೆಯ ಹಿಂದೂ ಪರ ಅರ್ಜಿದಾರರು ಮನವಿ ಮಾಡಿದ್ದರು.

ADVERTISEMENT

ವಿಡಿಯೊ ಸಮೀಕ್ಷೆಯಲ್ಲಿ ಕಂಡುಬಂದಿರುವ ಆಕೃತಿಯು ಕಾರಂಜಿಯ ಮೂಲ ಎಂದು ಮಸೀದಿ ಆಡಳಿತವು ಲಿಖಿತ ಹೇಳಿಕೆ ನೀಡಿತ್ತು

ಈ ಅರ್ಜಿಗಳ ಮೇಲಿನ ವಾದಗಳು ಮಂಗಳವಾರ ಪೂರ್ಣಗೊಂಡಿದ್ದವು. ನ್ಯಾಯಾಲಯವು ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

ಮುಸ್ಲಿಂ ಪರ ವಕೀಲ ಮುಮ್ತಾಜ್ ಅಹ್ಮದ್ ಅವರು ‘ಯಾವುದೇ ವಸ್ತುವಿನ ಕಾರ್ಬನ್ ಡೇಟಿಂಗ್ ಮಾಡಲು ಸಾಧ್ಯವಿಲ್ಲ. ಕಾರ್ಬನ್ ಡೇಟಿಂಗ್ ಹೆಸರಿನಲ್ಲಿ ವಸ್ತು ಹಾನಿಗೊಳಗಾದರೆ, ಅದು ಸುಪ್ರೀಂ ಕೋರ್ಟ್‌ನ ಆದೇಶವನ್ನು ಧಿಕ್ಕರಿಸಿದಂತೆ ಆಗುತ್ತದೆ’ ಎಂದು ಪ್ರತಿಪಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.