ನವದೆಹಲಿ: ಅಲಹಾಬಾದ್ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ಇಂದು (ಶುಕ್ರವಾರ) ಆರಂಭವಾಗಿದೆ.
ಸಮೀಕ್ಷೆ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಈಗಾಗಲೇ ಬಿಗಿ ಪೊಲೀಸ್ ಭದ್ರತೆ ಕಲ್ಪಸಲಾಗಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್ ಮಾಡಿದೆ.
ಸಮೀಕ್ಷೆ ಕಾರ್ಯಕ್ಕೆ ನೆರವು ನೀಡುವಂತೆ ಕೋರಿ ಇಲಾಖೆಯು ವಾರಾಣಸಿ ಜಿಲ್ಲಾಡಳಿತವನ್ನು ಸಂಪರ್ಕಿಸಿದೆ ಎಂದು ಮೂಲಗಳು ಹೇಳಿವೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ವಾರಾಣಸಿ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಮುಸ್ಲಿಂ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ತಿರಸ್ಕರಿಸಿದ್ದು, ಸಮೀಕ್ಷೆ ನಡೆಸಲು ಅನುಮತಿ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್ ದಿವಾಕರ್ ಅವರಿದ್ದ ನ್ಯಾಯಪೀಠ, ‘ಜಿಲ್ಲಾ ನ್ಯಾಯಾಲಯದ ಆದೇಶ ನ್ಯಾಯಬದ್ಧ ಹಾಗೂ ಸಮರ್ಪಕವಾಗಿದ್ದು, ಈ ವಿಷಯದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ’ ಎಂಬ ಮಹತ್ವದ ತೀರ್ಪು ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಾರಾಣಸಿ ಜಿಲ್ಲಾಧಿಕಾರಿ ಎಸ್.ರಾಜಲಿಂಗಮ್, ‘ಎಎಸ್‌ಐ ನಡೆಸಲಿರುವ ವೈಜ್ಞಾನಿಕ ಸಮೀಕ್ಷೆಗೆ ಸಾಧ್ಯವಾದ ಎಲ್ಲ ನೆರವನ್ನು ಜಿಲ್ಲಾಡಳಿತ ನೀಡಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.