ADVERTISEMENT

ಪುಣೆ ನ್ಯಾಯಾಲಯ ಆದೇಶ: ಪೊಲೀಸರ ವಶಕ್ಕೆ ಹೋರಾಟಗಾರರು

ಪಿಟಿಐ
Published 27 ಅಕ್ಟೋಬರ್ 2018, 17:33 IST
Last Updated 27 ಅಕ್ಟೋಬರ್ 2018, 17:33 IST
ಸುಧಾ ಭಾರದ್ವಾಜ್‌
ಸುಧಾ ಭಾರದ್ವಾಜ್‌   

ಪುಣೆ: ಮಾವೊವಾದಿಗಳ ಜತೆ ನಂಟು ಹೊಂದಿದ ಆರೋಪದಲ್ಲಿ ಗೃಹಬಂಧನದಲ್ಲಿದ್ದ ಸಾಮಾಜಿಕ ಹೋರಾಟಗಾರರಾದ ವರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೆರಾ ಮತ್ತು ಸುಧಾ ಭಾರದ್ವಾಜ್‌ ಅವರನ್ನು ಸ್ಥಳೀಯ ನ್ಯಾಯಾಲಯ ನವೆಂಬರ್‌ 6ರವರೆಗೆ ಪೊಲೀಸರ ವಶಕ್ಕೆ ನೀಡಿದೆ.

ಈ ಇಬ್ಬರ ಗೃಹಬಂಧನದ ಅವಧಿ ಶುಕ್ರವಾರ (ಅ.26) ಅಂತ್ಯವಾಗಿತ್ತು.

‘ಸುಪ್ರೀಂ ಕೋರ್ಟ್‌ ಆದೇಶದಂತೆ ಈ ಎಲ್ಲಾ ಹೋರಾಟಗಾರರು ಗೃಬಂಧನದಲ್ಲಿದ್ದಾರೆ. ಇದರಿಂದ ವಿಚಾರಣೆ ಕಷ್ಟವಾದ್ದರಿಂದ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು’ ಎಂದು ಸರ್ಕಾರಿ ವಕೀಲರು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.

ADVERTISEMENT

‘ಹೋರಾಟಗಾರರು ನಕ್ಸಲರ ಜತೆ ಸಂಪರ್ಕ ಹೊಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ನಕ್ಸಲ್ ಚಟುವಟಿಕೆಗಳಿಗೆ ವಿದ್ಯಾರ್ಥಿ ಗಳ ಮನವೊಲಿಸಿದ, ಹಣ ಸಂಗ್ರಹಸಿ ದ ಬಗ್ಗೆ ಸುಳಿವು ದೊರೆತಿದೆ’ ಎಂದರು.

ಇದನ್ನು ಮಾನ್ಯ ಮಾಡಿದ ನ್ಯಾಯಾಲಯವು ಮೂವರನ್ನು ಕಾರ್ಯಕರ್ತರನ್ನು ನ.6ರವರೆಗೆ ಪೊಲೀ‌ಸ್ ವಶಕ್ಕೆ ಒಪ್ಪಿಸಿತು.

‘ಬಂಧಿತರಿಂದ ವಶಪಡಿಸಿಕೊಂಡ ದಾಖಲೆ, ವಸ್ತುಗಳು ಎರಡು ತಿಂಗಳಿಂದ ಪೊಲೀಸರ ಬಳಿ ಇವೆ. ಈಗ ಮತ್ತೆ ತನಿಖೆಯ ಅಗತ್ಯವಿಲ್ಲ. ಗೃಹ ಬಂಧನ ಅವಧಿ ಮುಗಿಯುವ ಮುನ್ನವೇ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಇದು ನ್ಯಾಯಾಂಗ ನಿಂದನೆ. ಇದರ ವಿರುದ್ಧ ಹೈಕೋರ್ಟ್‌ ಮೊರೆ ಹೋಗುತ್ತೇವೆ’ ಎಂದು ಹೋರಾಟಗಾರರ ಪರ ವಕೀಲರು ಹೇಳಿದ್ದಾರೆ.

ದಲಿತ ಯುವಕರ ಹಾದಿ ತಪ್ಪಿಸುತ್ತಿದ್ದಾರೆ: ಪೊಲೀಸರು

ಮುಂಬೈ: ‘ಸಾಮಾಜಿಕ ಹೋರಾಟಗಾರರು ದಲಿತ ಚಳವಳಿಯ ಹಾದಿ ತಪ್ಪಿಸುತ್ತಿದ್ದಾರೆ. ನಿಷೇಧಿತ ಸಿಪಿಎಂನಿಂದ ಪ್ರಭಾವಿತವಾಗಿರುವ ನಕ್ಸಲೀಯ ನಿಲುವುಗಳನ್ನುದಲಿತ ಯುವಕರಲ್ಲಿ ತುಂಬುತ್ತಿದ್ದಾರೆ’ ಎಂದು ಪುಣೆ ಪೊಲೀಸರು ನ್ಯಾಯಾಲಯದ ಎದುರು ಹೇಳಿದ್ದಾರೆ.

‘ವಿಶ್ವವಿದ್ಯಾಲಯಗಳಲ್ಲಿ ದಲಿತ ಯುವಕರನ್ನು ಹುಡುಕಿ ಅವರ ಮನಃಪರಿವರ್ತನೆ ಮಾಡುತ್ತಿದ್ದಾರೆ. ಆ ಯುವಕರನ್ನು ಕಾಡಿಗೆ ದೂಡುತ್ತಿದ್ದಾರೆ. ಆ ಯುವಕರೆಲ್ಲರೂ ನಕ್ಸಲರಾಗುತ್ತಿದ್ದಾರೆ’ ಎಂದು ಪೊಲೀಸರು
ಆರೋಪಿಸಿದ್ದಾರೆ.

ಸಾಮಾಜಿಕ ಹೋರಾಟಗಾರರ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ ‘ರಿಮ್ಯಾಂಡ್ ನೋಟ್‌’ನಲ್ಲಿ ಈ ಮಾಹಿತಿ ಇದೆ.

ಭೀಮಾ– ಕೋರೆಗಾಂವ್ ಮಾತ್ರವಲ್ಲ, ದೇಶದ ಹಲವು ನಗರಗಳಲ್ಲಿ ಇವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ.

ನಕ್ಸಲರ ಜತೆ ನಂಟು ಇದ್ದವರ ಜತೆ ಹೋರಾಟಗಾರರು ಸಂಪರ್ಕ ಹೊಂದಿದ್ದಾರೆ. ಇವರ ಹಣಕಾಸು ವ್ಯವಹಾರ, ಬ್ಯಾಂಕ್ ವಹಿವಾಟು, ಸಾಮಾಜಿಕ ಜಾಲತಾಣ ಖಾತೆಗಳು, ಇ–ಮೇಲ್‌ ಮತ್ತು ಫೋನ್ ಕರೆ ವಿವರಗಳನ್ನು ಪರಿಶೀಲಿಸಬೇಕಿದೆ ಎಂದೂ ಪೊಲೀಸರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.