ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣ, ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಕವಿ, ಹೋರಾಟಗಾರ ವರವರ ರಾವ್ ಅವರು ನಾನಾವತಿ ಆಸ್ಪತ್ರೆಯಿಂದ ಶನಿವಾರ ರಾತ್ರಿ ಬಿಡುಗಡೆಯಾಗಿದ್ದಾರೆ.
82 ವರ್ಷದ ರಾವ್ ಅವರಿಗೆ ಫೆಬ್ರುವರಿ 22ರಂದು ವೈದ್ಯಕೀಯ ಕಾರಣಗಳಿಗಾಗಿ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಸೂಕ್ತ ಜಾಮೀನುದಾರರು ದೊರೆಯುವವರೆಗೂ ನಗದು ಜಾಮೀನು ನೀಡಲು ಅವಕಾಶ ನೀಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಕಳೆದ ಸೋಮವಾರ ನ್ಯಾಯಾಲಯ ಅನುಮತಿ ನೀಡಿತ್ತು.
ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯವು ಆದೇಶಿಸಿತ್ತು.
ಬಂಧನದಲ್ಲಿದ್ದ ರಾವ್ ಅವರನ್ನು ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣ ಏನು?
ದಲಿತರು ಮರಾಠಾ ಪೇಶ್ವೆಗಳ ವಿರುದ್ಧ ಯುದ್ಧದಲ್ಲಿ ಜಯಗಳಿಸಿದ ದ್ವಿಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಭೀಮಾ ಕೋರೆಗಾಂವ್‌ನಲ್ಲಿ 2018ರ ಜನವರಿ 1ರಂದು ಹಿಂಸಾಚಾರ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಹಿಂಸಾಚಾರಕ್ಕೆ ನಕ್ಸಲರ ನಂಟು ಇದೆ ಎಂದು ಆರೋಪಿಸಿದ್ದರು. 2017ರ ಡಿಸೆಂಬರ್ 31ರಂದು ನಡೆದ ಸಭೆಗೆ ನಕ್ಸಲರೇ ಹಣಕಾಸು ನೆರವು ನೀಡಿದ್ದರು. ಈ ಸಭೆಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ಮಾಡಲಾಗಿತ್ತು. ಅದು ಹಿಂಸೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಕವಿ ವರವರರಾವ್, ವಕೀಲೆ ಸುಧಾ ಭಾರದ್ವಾಜ್, ಸಾಮಾಜಿಕ ಕಾರ್ಯಕರ್ತರಾದ ವರ್ನನ್ ಗೊನ್ಸಾಲ್ವೆಸ್ ಮತ್ತು ರೋನಾ ವಿಲ್ಸನ್, ಮಾನವ ಹಕ್ಕು ಹೋರಾಟಗಾರರಾದ ಅರುಣ್ ಫೆರೇರಾ ಮತ್ತು ಗೌತಮ್ ನವಲ್ಖಾ ಅವರನ್ನು ಬಂಧಿಸಲಾಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.