ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ’ ಎಂಬ ಚರ್ಚೆಯಲ್ಲಿ ಮಾತನಾಡಲು ‘ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿ’ (ಆಕ್ಸ್‌ಫರ್ಡ್ ಒಕ್ಕೂಟ) ನೀಡಿದ ಆಹ್ವಾನವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ತಿರಸ್ಕರಿಸಿದ್ದಾರೆ.
‘ದೇಶೀಯ ಸವಾಲುಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ. ಅಂತಹ ನಡೆಯು ಅಪಮಾನಕಾರಿ ನಡೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೋದರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಭಾರತದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ. ಅವರ ಮಾತುಗಳು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ನೀಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದ್ದು, ಸಂಸತ್ ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪವು ಬಹುತೇಕ ವ್ಯರ್ಥಗೊಂಡಿದೆ. ಈ ಮಧ್ಯೆ, ಚರ್ಚೆಯಲ್ಲಿ ಭಾಗವಹಿಸಲು ವರುಣ್ ಗಾಂಧಿ ಅವರಿಗೆ ಆಹ್ವಾನ ಬಂದಿದೆ.
ವರಣ್ ಗಾಂಧಿ ಅವರು ಬಿಜೆಪಿ ಸರ್ಕಾರದ ವಿಮರ್ಶಕರೆನಿಸಿಕೊಂಡಿದ್ದರೂ, ಆಕ್ಸ್‌ಫರ್ಡ್ ಒಕ್ಕೂಟದ ಚರ್ಚೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ‘ಮೋದಿ ನೇತೃತ್ವದಲ್ಲಿ ಭಾರತ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ’ ಎಂಬ ಸದನದ ನಿರ್ಣಯಕ್ಕೆ ಆಕ್ಸಫರ್ಡ್ ಒಕ್ಕೂಟದ ಚರ್ಚೆಯ ವಿಷಯವು ವಿರುದ್ಧವಾಗಿದೆ. ಅದಕ್ಕಾಗಿಯೇ ಚರ್ಚೆಯಲ್ಲಿ ಭಾಗವಹಿಸಲು ಅವರು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ ಮತ್ತು ಜೂನ್ ನಡುವೆ ಈ ಚರ್ಚೆ ನಿಗದಿಯಾಗಿತ್ತು ಎನ್ನಲಾಗಿದ್ದು, ಆಕ್ಸ್‌ಫರ್ಡ್ ಒಕ್ಕೂಟದ ಅಧ್ಯಕ್ಷ ಮ್ಯಾಥ್ಯೂ ಅವರು ಪರವಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಆಹ್ವಾನ ಕಳುಹಿಸಲಾಗಿತ್ತು.
ಆಹ್ವಾನವನ್ನು ತಿರಸ್ಕರಿಸಿರುವ ವರುಣ್ ಗಾಂಧಿ ಅವರು ಒಕ್ಕೂಟಕ್ಕೆ ಲಿಖಿತ ಉತ್ತರವನ್ನೂ ನೀಡಿದ್ದಾರೆ. ‘ಭಾರತದ ನಾಗರಿಕರಿಗೆ ಈ ರೀತಿಯ ವಿಷಯಗಳನ್ನು ಆಂತರಿಕವಾಗಿ ಚರ್ಚಿಸಲು ಸ್ವಾತಂತ್ರ್ಯವಿದೆ. ಸಾರ್ವಜನಿಕ ವಲಯ ಮತ್ತು ಸಂಸತ್ತಿನಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸಲು ಮುಕ್ತ ಅವಕಾಶವಿದೆ’ ಎಂದು ಅವರು ಹೇಳಿದ್ದಾರೆ.
‘ಭಾರತದೊಳಗೆ ನೀತಿ ನಿರೂಪಕರನ್ನು ಟೀಕೆ ಮಾಡಬಹುದು. ಅವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವುದು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ. ಅಲ್ಲದೇ, ಅಗೌರವಕಾರಿ ಕೃತ್ಯ’ ಎಂದು ಅವರು ಹೇಳಿದರು.
‘ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿ’ಯು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ನಗರದಲ್ಲಿರುವ ಒಂದು ಚರ್ಚಾ ಸಂಸ್ಥೆಯಾಗಿದೆ. ರಾಜಕೀಯ, ಶೈಕ್ಷಣಿಕ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಪ್ರಮುಖ ವ್ಯಕ್ತಿಗಳಿಗೆ ಈ ಸಂಸ್ಥೆಯು ಚರ್ಚೆಗೆ ವೇದಿಕೆ ಕಲ್ಪಿಸುತ್ತಾ ಬಂದಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.