ಅಕೋಲಾ, ಮಹಾರಾಷ್ಟ್ರ: ವಿ.ಡಿ. ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಸಾವರ್ಕರ್ ಬ್ರಿಟಿಷ್ ಆಡಳಿತಕ್ಕೆ ಕ್ಷಮಾಪಣೆ ಪತ್ರ ಬರೆದಿದ್ದರು ಎಂದರು.
ಭಾರತ್ ಜೋಡೊ ಯಾತ್ರೆಯ ಭಾಗವಾಗಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ ಪತ್ರವೊಂದನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ, ಇದು ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಬರೆದ ಕ್ಷಮಾಪಣೆ ಪತ್ರ ಎಂದರು.
'ನನ್ನನ್ನು ನಿಮ್ಮ ವಿಧೇಯ ಸೇವಕನನ್ನಾಗಿ ಉಳಿಸಿಕೊಳ್ಳುವಂತೆ ನಾನು ಬೇಡಿಕೊಳ್ಳುತ್ತಿದ್ದೇನೆ' ಎಂದಿರುವ ಪತ್ರದ ಕೊನೆಯ ಸಾಲನ್ನು ರಾಹುಲ್ ಗಾಂಧಿ ಓದಿ ಹೇಳಿದರು. ಪತ್ರದಲ್ಲಿ ವಿ.ಡಿ. ಸಾವರ್ಕರ್ ಅವರ ಸಹಿ ಇದೆ ಎಂದು ಒತ್ತಿ ಹೇಳಿದರು.
ಭಯದಿಂದ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಸಹಿ ಮಾಡಿದ್ದಾರೆ. ಈ ಮೂಲಕ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರೂ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ರಾಷ್ಟ್ರದಲ್ಲಿ ದ್ವೇಷ, ಭಯ ಮತ್ತು ಹಿಂಸೆಯನ್ನು ಹರಡುತ್ತಿದೆ ಎಂದು ರಾಹುಲ್ ಪುನರುಚ್ಛರಿಸಿದರು.
ತಮ್ಮನ್ನು ವಿರೋಧಿಸುವವರ ಮೇಲೆ ಸಹಾನುಭೂತಿ ಮತ್ತು ವಿಶ್ವಾಸವನ್ನು ತೋರ್ಪಡಿಸುವುದು ಭಾರತದ ಮೌಲ್ಯಗಳು. ನಿಮ್ಮ ವಿರೋಧಿಯ ವಿಚಾರಗಳ ಕುರಿತು ಸಹಮತವಿಲ್ಲದಿರುವುದನ್ನು ವಿಶ್ವಾಸ ಮತ್ತು ಪ್ರೀತಿಯಿಂದ ತೋರಿಸಬಹುದು. ಅದನ್ನು ಈ ಯಾತ್ರೆ ಮಾಡುತ್ತಿದೆ ಎಂದರು.
ಚುನಾವಣೆಗೂ ಮೊದಲು ಕಾಂಗ್ರೆಸ್ ಮತ್ತು ಪ್ರತಿಪಕ್ಷ ನಾಯಕರು ಬಿಜೆಪಿ ಸೇರುವ ಮೂಲಕ 'ಸಿದ್ಧಾಂತ'ಕ್ಕೆ ದ್ರೋಹ ಬಗೆದಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಸಿದ ರಾಹುಲ್ ಗಾಂಧಿ, ಇದರಿಂದ ಪ್ರತಿಪಕ್ಷಗಳು ಸ್ವಚ್ಛಗೊಳ್ಳುತ್ತವೆ ಎಂದರು.
ಅವರು ಹಣದ ಆಸೆಗೆ ತಮ್ಮನ್ನು ತಾವು ಬಿಜೆಪಿಗೆ ಮಾರಿಕೊಳ್ಳುತ್ತಿದ್ದಾರೆ. ಇದರಿಂದ ಸುತ್ತಲಿರುವ ಉತ್ತಮ ನಾಯಕರು ಕಾಂಗ್ರೆಸ್‌ಗೆ ಬರುತ್ತಾರೆ ಎಂದರು.
ರಾಹುಲ್ ಗಾಂಧಿ 2024ರ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಇಂತಹ ಪ್ರಶ್ನೆಗಳು ಯಾತ್ರೆಯಿಂದ ಗಮನವನ್ನು ಬೇರೆಡೆ ಸೆಳೆಯುತ್ತವೆ ಎಂದರು.
ಈ ಯಾತ್ರೆಯನ್ನು ಮಹಾತ್ಮ ಗಾಂಧಿ ಅವರ ಯಾತ್ರೆಗೆ ಹೋಲಿಸುವುದು ತಪ್ಪು ಎಂದ ರಾಹುಲ್ ಗಾಂಧಿ, ಭಾರತವನ್ನು ಆಂತರಿಕವಾಗಿ ಒಗ್ಗೂಡಿಸುವುದು ಯಾತ್ರೆಯ ಮೂಲ ಉದ್ದೇಶ ಎಂದು ಒತ್ತಿ ಹೇಳಿದರು.
ಯಾತ್ರೆಯ ಪರಿಣಾಮದ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಭವಿಷ್ಯ ಹೇಳುವವನಲ್ಲ ಮತ್ತು ಪಾದಯಾತ್ರೆಯಿಂದ ಏನೇನು ಪರಿಣಾಮ ಸಂಭವಿಸುತ್ತದೆ ಎಂಬುದನ್ನು ಮೊದಲೇ ಹೇಳಲು ಸಾಧ್ಯವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.