ಇಂದೋರ್: ವಿ.ಡಿ.ಸಾವರ್ಕರ್ ವ್ಯಕ್ತಿತ್ವ ‘ಭಾರತ ರತ್ನ’ಕ್ಕಿಂತಲೂ ಮಿಗಿಲಾದದ್ದು ಎಂದು ಕೇಂದ್ರ ಮಾಹಿತಿ ಆಯುಕ್ತ (ಸಿಐಸಿ) ಉದಯ್ ಮಾಹುರ್‌ಕರ್ ಅಭಿಪ್ರಾಯಪಟ್ಟಿದ್ದಾರೆ.
ಇಂದೋರ್ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ ಸಂದರ್ಭ ಮಾತನಾಡಿದ ಅವರು, ‘ಭಾರತದಲ್ಲಿ ಸಾವರ್ಕರ್ ಯುಗ ಆರಂಭಗೊಂಡಿದೆ’ ಎಂದು ಹೇಳಿದ್ದಾರೆ.
‘ಸಾವರ್ಕರ್ ಭಾರತ ರತ್ನಕ್ಕಿಂತಲೂ ಮಿಗಿಲಾದ ವ್ಯಕ್ತಿತ್ವ ಹೊಂದಿದವರು ಎಂದು ನಾನು ಭಾವಿಸುತ್ತೇನೆ. ಅವರಿಗೆ ‘ಭಾರತ ರತ್ನ’ ದೊರೆತರೆ ಉತ್ತಮ. ಅದು ದೊರೆಯದೇ ಇದ್ದರೂ ಅವರ ವ್ಯಕ್ತಿತ್ವ ಹಾಗೆಯೇ ಇರಲಿದೆ. ದೇಶದಲ್ಲಿ ಸಾವರ್ಕರ್ ಯುಗ ಆರಂಭವಾಗಿದೆ’ ಎಂದು ಮಾಹುರ್‌ಕರ್ ಹೇಳಿದ್ದಾರೆ.
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮರಳಿ ಅಧಿಕಾರಕ್ಕೇರಿದರೆ ಸಾವರ್ಕರ್‌ಗೆ ದೇಶದ ಪರಮೋಚ್ಛ ಗೌರವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಉಲ್ಲೇಖಿಸಿತ್ತು.
‘ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿ ರದ್ದಾಗಬಹುದು ಎಂದು ಯಾರೂ ಭಾವಿಸಿರಲಿಲ್ಲ. ಆದರೆ, ಅದು ಆಗಿದೆ. ಸರ್ಕಾರದ ಈ ನಡೆ ದೇಶದಲ್ಲಿ ಸಾವರ್ಕರ್ ಯುಗವನ್ನು ಆರಂಭಿಸಿದೆ’ ಎಂದು ಅವರು ಹೇಳಿದ್ದಾರೆ. ಮಾಹುರ್‌ಕರ್ ಅವರು ‘ವೀರ ಸಾವರ್ಕರ್: ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಷಿಯನ್’ ಎಂಬ ಪುಸ್ತಕದ ಲೇಖಕರೂ ಹೌದು.
ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆ ಕೇಳಿದ್ದರು ಎಂಬ ವಿಚಾರ ವಿವಾದಕ್ಕೀಡಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ರಾಜಕೀಯದಲ್ಲಿ ಮುಸ್ಲಿಂ ತುಷ್ಟೀಕರಣದ ಹಸಿವು ಹೆಚ್ಚಿದಷ್ಟೂ ಸಾವರ್ಕರ್ ಅವರನ್ನು ಅವಮಾನಿಸುವುದು ಹೆಚ್ಚಾಗಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.