ತೂತ್ತುಕುಡಿ:ತೂತ್ತುಕುಡಿಯಲ್ಲಿನ ತಾಮ್ರ ಸಂಸ್ಕರಣಾ ಘಟಕದಲ್ಲಿ ಟ್ಯಾಂಕ್‌ವೊಂದರಿಂದ ಗಂಧಕಾಮ್ಲ (ಸಲ್ಫ್ಯೂರಿಕ್ ಆಸಿಡ್) ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗಿತ್ತು. ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡು ಹೆಚ್ಚಿನ ಹಾನಿ ತಪ್ಪಿಸಲಾಗಿದೆ ಎಂದು ವೇದಾಂತ ಕಂಪನಿ ಬುಧವಾರ ಮದ್ರಾಸ್ ಹೈಕೋರ್ಟ್‌ಗೆ ಹೇಳಿದೆ.
‘ಸಲ್ಫರ್ ಆಸಿಡ್ ಸೋರಿಕೆ ಅಲ್ಪಪ್ರಮಾಣದಲ್ಲಾಗಿದ್ದು, ಯಾವುದೇ ಹಾನಿಯಾಗಿಲ್ಲ’ ಎಂದು ಭಾನುವಾರ ಜಿಲ್ಲಾಡಳಿತ ಹೇಳಿತ್ತು.
‘ಗಂಧಕಾಮ್ಲ ಸೋರಿಕೆಯಿಂದ ವಾಯು ಮತ್ತು ಜಲಮೂಲಕ್ಕೆ ಆಗುವ ಹಾನಿ ತಪ್ಪಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.
‘ಟ್ಯಾಂಕ್‌ನಿಂದ ಸೋರಿಕೆಯಾದ ಗಂಧಕಾಮ್ಲವು ಘಟಕದ ತುಂಬಾ ಹರಡಿದ್ದರೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಕಾರಣ, ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಬಹುದಾದ ರಾಸಾಯನಿಕಗಳು ಮತ್ತು ವಸ್ತುಗಳು ಘಟಕದಲ್ಲಿ ಇದ್ದವು’ ಎಂದು ಅದು ಹೇಳಿದೆ.
‘ನಮ್ಮ ಪರಿಶೀಲನೆಯಂತೆ, ಗಂಧಕಾಮ್ಲ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಎಲ್ಲ ಟ್ಯಾಂಕ್‌ಗಳಲ್ಲಿನ ಗಂಧಕಾಮ್ಲವನ್ನು ಸಂಪೂರ್ಣವಾಗಿ ಖಾಲಿ ಮಾಡಿಸಲಾಗಿತ್ತು. ಆದರೆ, ಕಂಪನಿ ಏಕೆ ದೊಡ್ಡ ಹಾನಿಯಾಗಿದೆ ಎಂದು ಹೇಳಿದೆಯೋ ಗೊತ್ತಿಲ್ಲ’ ಎಂದು ಜಿಲ್ಲೆಯ ಉನ್ನತ ಅಧಿಕಾರಿ ಸಂದೀಪ ನಂದೂರಿ ಹೇಳಿದ್ದಾರೆ.
ಜಲ ಮತ್ತು ವಾಯುಮಾಲಿನ್ಯ ಉಂಟಾಗುತ್ತಿರುವುದರಿಂದ ಸಂಪೂರ್ಣವಾಗಿ ಈ ಘಟಕ ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು.ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ, ತೂತ್ತುಕುಡಿಯಲ್ಲಿನ ಘಟಕ ಮುಚ್ಚುವಂತೆ ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಕಳೆದ ತಿಂಗಳು ತಮಿಳುನಾಡು ಸರ್ಕಾರ ಆದೇಶಿಸಿತ್ತು. ಹಿಂಸಾಚಾರದಲ್ಲಿ 13 ಜನ ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.