ಚೆನ್ನೈ:ತೂತುಕುಡಿಯಲ್ಲಿರುವ ವೇದಾಂತ ಗ್ರೂಪ್ ಮಾಲೀಕತ್ವದ ವಿವಾದಾತ್ಮಕ ಸ್ಟರ್‌ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ತೆರವುಗೊಳಿಸಿದ್ದು, ಘಟಕದ ಪುನರಾರಂಭಕ್ಕೆ ಅನುವು ಮಾಡಿಕೊಟ್ಟಿದೆ.
ಸ್ಟರ್‌ಲೈಟ್ ಘಟಕವು 1996ರಲ್ಲಿ ಕಾರ್ಯಾರಂಭ ಮಾಡಿತ್ತು. ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡದ ಕಾರಣ ಅದನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಸ್ಥಳೀಯರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.ಮೇ ತಿಂಗಳಲ್ಲಿಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಪೊಲೀಸರು ನಡೆಸಿದ ಗೋಲಿಬಾರ್ ವೇಳೆ 13 ಜನರು ಮೃತಪಟ್ಟಿದ್ದರು. ಹೀಗಾಗಿ ಘಟಕವನ್ನುಶಾಶ್ವತವಾಗಿ ಮುಚ್ಚುವಂತೆ ಮುಖ್ಯಮಂತ್ರಿಪಳನಿಸ್ವಾಮಿ ಆದೇಶಿಸಿದ್ದರು.
ಇದೀಗ ಎನ್‌ಜಿಟಿಯು, ತಾಮ್ರ ಸಂಸ್ಕರಣಾ ಘಟಕ ಪುನರಾರಂಭಿಸಲು ಮೂರು ವಾರಗಳ ಒಳಗಾಗಿ ನವೀಕರಣ ಆದೇಶ ರವಾನಿಸುವಂತೆ ತಮಿಳುನಾಡು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.ಜೊತೆಗೆ ಆ ಪ್ರದೇಶದ ನಿವಾಸಿಗಳ ಕಲ್ಯಾಣಕ್ಕಾಗಿ ಮೂರು ವರ್ಷಗಳ ಅವಧಿಯಲ್ಲಿ ₹ 1 ಕೋಟಿ ವಿನಿಯೋಗಿಸುವಂತೆ ಘಟಕಕ್ಕೂ ಆದೇಶಿಸಿದೆ.ವಿಚಾರಣೆ ಸಂದರ್ಭದಲ್ಲಿನೀರು ಸರಬರಾಜು, ಆಸ್ಪತ್ರೆ, ಆರೋಗ್ಯ ಸೇವೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಮುಂತಾದ ಯೋಜನೆಗಳಿಗೆ ಹಣವನ್ನು ಖರ್ಚು ಮಾಡಬಹುದೆಂದು ತ್ಯಾಜ್ಯ ಮಂಡಳಿ ಸಲಹೆ ನೀಡಿದೆ.
ಕಳೆದ ತಿಂಗಳು ನಡೆದ ಎನ್‌ಜಿಟಿ ತಜ್ಞರ ಸಮಿತಿ ಸಭೆಯಲ್ಲಿ, ತಮಿಳುನಾಡು ಸರ್ಕಾರವು ಘಟಕವನ್ನು ಮುಚ್ಚುವಂತೆ ಆದೇಶಿಸುವ ಮುನ್ನ ನಿಯಾಮಾವಳಿಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಸದ್ಯ ಎನ್‌ಜಿಟಿ ಆದೇಶದ ಬಗ್ಗೆ ಆಡಳಿತ ಪಕ್ಷ ಎಐಡಿಎಂಕೆ ಸೇರಿದಂತೆ ಎಲ್ಲ ಪಕ್ಷಗಳೂ ಅಸಮಾಧಾನ ಹೊರಹಾಕಿವೆ. ‘ಎನ್‌ಜಿಟಿ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಪರಿಸರ ಸಚಿವ ಕರುಪ್ಪಣ್ಣನ್ ತಿಳಿಸಿದ್ದಾರೆ.
ತಾಮ್ರ ಸಂಸ್ಕರಣಾ ಘಟಕವು ಜಲಮೂಲವನ್ನು ಮಲಿನಗೊಳಿಸುತ್ತಿತ್ತ, ಇದರಿಂದ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದುಸ್ಥಳೀಯರು ಹಾಗೂ ಪರಿಸರವಾದಿಗಳು ಎನ್‌ಜಿಟಿ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.