ಬೆಂಗಳೂರು: ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೇಶದ ವಾಹನ ತಯಾರಿಕಾ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.2018ರ ಜೂನ್ ತಿಂಗಳಿನಿಂದ 2019ರ ಜೂನ್ ವರೆಗೂಮಾರಾಟದಲ್ಲಿ ಇಳಿಕೆ ಕಂಡಿದೆ. ಕಾರು, ಬೈಕ್, ಸ್ಕೂಟರ್ ಹೀಗೆ ಎಲ್ಲಾ ವಿಭಾಗಗಳೂ ನಕಾರಾತ್ಮಕ ಪ್ರಗತಿಯನ್ನೇ ಕಂಡಿವೆ.
ಗ್ರಾಮೀಣ ಆರ್ಥಿಕತೆ ಚೇತರಿಕೆ ಕಂಡರೆ ವಾಹನ ಮಾರಾಟ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆಯನ್ನು ಕಂಪನಿಗಳು ಹೊಂದಿವೆ. ಆದರೆ, ಮುಂಗಾರು ವಿಳಂಬವಾಗಿದೆ. ಹೀಗಾಗಿ ಈ ವರ್ಷದಲ್ಲಿ ಮಾರಾಟದ ಅಂದಾಜು ಮಾಡುವುದೂ ಅವುಗಳ ಪಾಲಿಗೆ ಕಷ್ಟವಾಗಲಿದೆ.
ನಗದು ಕೊರತೆ, ವಾಹನಗಳ ಬೆಲೆ ಏರಿಕೆ ಮತ್ತು ಲೋಕಸಭಾ ಚುನಾವಣಾ ಫಲಿತಾಂಶದ ಅನಿಶ್ಚಿತತೆಯು 2018–19ನೇ ಹಣಕಾಸು ವರ್ಷದ ಪ್ರಯಾಣಿಕ ವಾಹನ ಮಾರಾಟಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ. ಶೇ 2.7ರಷ್ಟು ಅಲ್ಪ ಪ್ರಗತಿ ಮಾತ್ರ ಸಾಧ್ಯವಾಗಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಈ ವರ್ಷ ಭಾರಿ ಮಾರಾಟ ಪ್ರಗತಿಯನ್ನು ನಿರೀಕ್ಷಿಸುವುದು ಕಷ್ಟ ಎನ್ನುವ ಅಭಿಪ್ರಾಯ ಮಾರುಕಟ್ಟೆ ತಜ್ಞರದ್ದು.
ಮೇ ತಿಂಗಳಿನಲ್ಲಿನ ಪ್ರಯಾಣಿಕ ವಾಹನ ಮಾರಾಟ ಶೇ 20.55ರಷ್ಟು ಇಳಿಕೆಯಾಗಿದ್ದು, 18 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಇಳಿಕೆ ಇದಾಗಿದೆ. 2001ರ ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 21.91ರಷ್ಟು ಇಳಿಕೆ ಕಂಡಿತ್ತು.
ಮಾರಾಟ ಕಡಿಮೆಯಾಗಲು ಕಾರಣಗಳೇನು
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯು ವಾಹನ ಉದ್ಯಮದ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಉದ್ಯಮ ವಲಯ ಅಭಿಪ್ರಾಯಪಟ್ಟಿದೆ.
ಸದ್ಯ ಶೇ 28ರಷ್ಟು ಜಿಎಸ್‌ಟಿ ಇದೆ. ಇದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಕಂಪನಿಗಳ ವಾದ. ಹೀಗಾಗಿ ಐಷಾರಾಮಿ ವಾಹನಗಳನ್ನು ಬಿಟ್ಟು ಉಳಿದ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 18ಕ್ಕೆ ತಗ್ಗಿಸಬೇಕು. ಇದರಿಂದ ಮಾರಾಟದಲ್ಲಿ ಹೆಚ್ಚಳವಾಗಲಿದ್ದು, ಉದ್ಯಮವೂ ಚೇತರಿಸಿಕೊಳ್ಳಲಿದೆ ಎಂದು ಕಂಪನಿಗಳು ಹೇಳುತ್ತಿವೆ.
ರಾಜ್ಯಗಳ ಮಧ್ಯೆ ವಾಹನಗಳನ್ನು ಮಾರಾಟ ಮಾಡುವಾಗ ಕೇಂದ್ರೀಯ ರಾಜ್ಯ ತೆರಿಗೆ (ಸಿಎಸ್‌ಟಿ) ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಬಂದ ಬಳಿಕ ಅದನ್ನು ಕೈಬಿಡಲಾಗಿದೆ. ವಾಹನ ತಯಾರಿಕಾ ಕಂಪನಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಪ್ರತ್ಯೇಕವಾದ ವೇರ್‌ಹೌಸ್‌ಗಳನ್ನು ಹೊಂದುವ ಅಗತ್ಯವಿಲ್ಲ. ಇದರಿಂದ ಕಾರ್ಯಾಚರಣೆ ವೆಚ್ಚ ಕಡಿಮೆಯಾಗಿದೆ. ಇನ್ನು, ಜಾಹೀರಾತು, ಪ್ರಚಾರ ಮತ್ತು ಇತರೆ ಕೆಲಸಗಳು ಇನ್‌ಪುಟ್ ಕ್ರೆಡಿಟ್ ಟ್ಯಾಕ್ಸ್ ಅಡಿ ಬರುತ್ತವೆ. ಹೀಗಾಗಿ ಇದರಿಂದಲೂ ಕಾರ್ಯಾಚರಣೆ ವೆಚ್ಚದಲ್ಲಿ ಇಳಿಕೆ ಆಗಿದೆ.ಹೀಗಿದ್ದರೂ ಕಂಪನಿಗಳಿಗೆ ದುಡಿಯುವ ಬಂಡವಾಳದ ಸಮಸ್ಯೆ ಎದುರಾಗಿದೆ.
ಥರ್ಡ್ ಪಾರ್ಟಿ ವಿಮೆ: ಕಾರ್, ದ್ವಿಚಕ್ರ ವಾಹನ ಮತ್ತು ಸಾರಿಗೆ ವಾಹನಗಳ ಥರ್ಡ್‌ಪಾರ್ಟಿ (ಟಿಪಿ) ವಿಮೆಯ ಕಂತು ಹೆಚ್ಚಾಗಿದೆ.
ಹೊಸ ಕಾರ್‌ಗಳಿಗೆ 3 ವರ್ಷಗಳವರೆಗಿನ ಅವಧಿಗೆ ಮತ್ತು ಹೊಸ ದ್ವಿಚಕ್ರ ವಾಹನಗಳಿಗೆ 5 ವರ್ಷಗಳವರೆಗೆ ಒಂದು ಬಾರಿಗೆ ಪಾವತಿಸುವ ‘ಟಿಪಿ’ ಕಂತು ‘ಸಿಸಿ’ ಆಧರಿಸಿ ಕ್ರಮವಾಗಿ ₹ 5,286 ರಿಂದ ₹ 24,305ರವರೆಗೆ ಮತ್ತು ₹ 1,045 ರಿಂದ ₹ 13,034ರಷ್ಟು ಇರಲಿದೆ.
ವ್ಯತಿರಿಕ್ತ ಪರಿಣಾಮ: ಥರ್ಡ್ ಪಾರ್ಟಿ ವಾಹನ ವಿಮೆ ಕಂತು ಹೆಚ್ಚಳವು ವಾಹನಗಳ ಮಾರಾಟದ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಾಹನ ವಿತರಕರ ಸಂಘದ ಒಕ್ಕೂಟವು (ಎಫ್‌ಎಡಿಎ) ಆತಂಕ ವ್ಯಕ್ತಪಡಿಸಿದೆ.
‘ದೇಶಿ ವಾಹನ ತಯಾರಿಕಾ ಉದ್ದಿಮೆಯು ಈಗಾಗಲೇ ಮಾರಾಟ ಕುಸಿತ ಆತಂಕ ಎದುರಿಸುತ್ತಿರುವಾಗ ಹಠಾತ್ತಾಗಿ ವಿಮೆ ದರ ಹೆಚ್ಚಿಸಿರುವುದು ವಾಹನಗಳ ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನಗಳ ಮಾರಾಟ ತಗ್ಗಿಸಲಿದೆ’ ಎಂದು ಒಕ್ಕೂಟದ ಗೌರವ ಕಾರ್ಯದರ್ಶಿ ಮನೀಷ್ ರಾಜ್ ಸಿಂಘಾನಿಯಾ ಹೇಳಿದ್ದಾರೆ.
ಬಿಎಸ್–6 ಮಾನದಂಡ: 2020ರ ಏಪ್ರಿಲ್ 1ರಿಂದ ವಾಹನ ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡವಾದ ಭಾರತ್ ಸ್ಟೇಜ್ (ಬಿಎಸ್) 6 ಜಾರಿಗೆ ಬರಲಿದೆ. ಇದಕ್ಕೆ ಅನುಗುಣವಾಗಿ ಡೀಸೆಲ್ ಎಂಜಿನ್ ತಯಾರಿಸಲು ಹೆಚ್ಚಿನ ಹಣ ಬೇಕು. ಹೀಗಾಗಿ ಇಂತಹ ವಾಹನಗಳ ತಯಾರಿಕೆ ಸ್ಥಗಿತಗೊಳಿಸುವುದಾಗಿಯೂ ಕಂಪನಿಗಳು ಘೋಷಿಸಿವೆ.
ಉದ್ಯಮದ ಬೇಡಿಕೆಗಳೇನು:ಎಲ್ಲಾ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 28 ರಿಂದ ಶೇ 18ಕ್ಕೆ ತಗ್ಗಿಸಬೇಕು.ಮಾಲಿನ್ಯಕಾರಕ, ಸುರಕ್ಷಿತವಲ್ಲದ ಮತ್ತು ಹಳೆಯ ವಾಹನಗಳ ಚಾಲನೆ ರದ್ದುಪಡಿಸಲು ವಾಹನಗಳ ಗುಜರಿ ಯೋಜನೆಗೆ ಉತ್ತೇಜನ ನೀಡಬೇಕು
ಸ್ಥಳೀಯ ತಯಾರಕರನ್ನು ಬೆಂಬಲಿಸಲು, ಸಂಪೂರ್ಣವಾಗಿ ಆಮದು ಮಾಡಿಕೊಳ್ಳುವ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯನ್ನು ಶೇ 25 ರಿಂದ ಶೇ 40ಕ್ಕೆ ಹೆಚ್ಚಿಸಬೇಕು.ಸೆಮಿ ನಾಕ್ಡ್ ಡೌನ್ ವಾಣಿಜ್ಯ ವಾಹನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 25 ರಿಂದ ಶೇ 20ಕ್ಕೆ ಹಾಗೂ ಕಂಪ್ಲೀಟ್ಲಿ ನಾಕ್ಡ್ ಡೌನ್ ವಾಹನಗಳ ಮೇಲಿನ ಸುಂಕವನ್ನು ಶೇ 15 ರಿಂದ ಶೇ 10ಕ್ಕೆ ಇಳಿಕೆ ಮಾಡಬೇಕು
ಅಂಕಿ–ಅಂಶ:ಕೇರ್ ರೇಟಿಂಗ್ಸ್ ಸಂಸ್ಥೆಯ ಮಾಹಿತಿ ಪ್ರಕಾರ ದೇಶದಲ್ಲಿ ಇದೀಗಮಾರಾಟವಾಗದೇ ಉಳಿದಿರುವ ಪ್ರಯಾಣಿಕ ವಾಹನಗಳ ಒಟ್ಟು ಮೌಲ್ಯ₹34,500 ಕೋಟಿ.ಮಾರಾಟವಾಗದೇ ಉಳಿದಿರುವ ದ್ವಿಚಕ್ರ ವಾಹನಗಳ ಒಟ್ಟು ಮೌಲ್ಯ₹ 17,250 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.